ಬೆಂಗಳೂರು: ಕಾನೂನು ಬಾಹಿರ ಕಟ್ಟಡ ನಿರ್ಮಾಣ ಕಾಮಗಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಬೆಂಗಳೂರಿನ ಬಾಬುಸಾಬ್ ಪಾಳ್ಯ ದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಬಾಹಿರವಾಗಿ, ಸೂಕ್ತ ಅನುಮತಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ವಿಭಾಗೀಯ ಅಧಿಕಾರಿಗೂ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.ಅನಧಿಕೃತ ನಿರ್ಮಾಣ ನಿಲ್ಲಿಸುವಂತೆ ನೋಟಿಸ್ ನೀಡಿದ್ದರೂ ನಿರ್ಮಾಣ ಮುಂದುವರೆಸಿದ ಮಾಲೀಕರು, ಗುತ್ತಿಗೆದಾರ, ಎಂಜಿನಿಯರ್ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ ಅವರಿಗೆ ಸಿಎಂ ಸೂಚನೆ ನೀಡಿದರು.
ಈಗಾಗಲೇ ಬಾಬುಸಾಬ್ ಪಾಳ್ಯದಲ್ಲಿ ಕುಸಿತಗೊಂಡಿರುವ ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಸೇವೆಯಿಂದ ಅಮನತು ಮಾಡಲಾಗಿದೆ. ಕಾರ್ಯಪಾಲಕ ಇಂಜಿನಿಯರ್ ವಲಯ ಆಯುಕ್ತರಿಗೆ ನೋಟಿಸ್ ನೀಡಲು ಆದೇಶಿಸಲಾಗಿದೆ. ನಿಯಮ ಅನುಸರಿಸದೆ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.
ಬಾಬುಸಾಬ್ ಪಾಳ್ಯದಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 8 ಮಂದಿಯನ್ನು ರಕ್ಷಿಸಲಾಗಿದೆ. 6 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಮೃತರ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ ಮೂರು ಲಕ್ಷ್ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ 2 ಲಕ್ಷ ಸೇರಿದಂತೆ ಒಟ್ಟು 5 ಲಕ್ಷ ರೂಪಾಯಿ ಪರಿಹಾಗ ನೀಡಲಾಗುವುದು. ಸರ್ಕಾರ ನೀಡುವ ಪರಿಹಾರ ಸಾವಿಗೆ ಸಮವಲ್ಲವಾದರೂ ಮಾನವೀಯತೆ ದೃಷ್ಟಿಯಿಂದ ಬಡ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಮೂರು ಕೋಟಿ ರೂಪಾಯಿ ಮೀಸಲಿರಿಸಲು ತೀರ್ಮಾನಿಸಲಾಗುವುದು ಎಂದರು.ಯಲಹಂಕ ಪ್ರದೇಶದಲ್ಲಿ ಈ ಹಿಂದೆ ಎಂದೂ ಕಾಣದಂತಹ 170 ಮಿಮೀನಷ್ಟು ಭಾರೀ ಪ್ರಮಾಣದ ಮಳೆ ಬಿದ್ದಿದೆ. ರಾಜಕಾಲುವೆಗಳ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಶಾಸಕ ಬೈರತಿ ಬಸವರಾಜ್ ಹಾಗೂ ಬಿಬಿಎಂಪಿ ಆಯುಕ್ತರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.ಘಟನಾ ಸ್ಥಳ ಪರಿಶೀಲನೆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಗತ್ಯ ಇರುವ ಎಲ್ಲಾ ಆಧುನಿಕ ವ್ಯವಸ್ಥೆ ಬಳಿಕ ಕಾರ್ಮಿಕರಿಗೆ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.