ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ಬೆಂಗಳೂರು ದಕ್ಷಿಣ ವಲಯ ಮಹಿಳಾ ಪ್ರಕಾರವು ರಾಜ್ಯೋತ್ಸವವನ್ನು ವಿಶೇಷ ರೀತಿಯಿಂದ ಆಚರಿಸಿತು. ನವೆಂಬರ್ ತಿಂಗಳ ನಾಲ್ಕು ವಾರಗಳು ಬೆಂಗಳೂರು ನಗರದ ಅಭಾಸಾಪ ಸದಸ್ಯರಿಗಾಗಿ ಕವನ, ಕವಿ ಪರಿಚಯ, ಕಥೆ ಮತ್ತು ಪುಸ್ತಕ ವಿಮರ್ಶೆಯ ಕಾರ್ಯಕ್ರಮವನ್ನು ಆಯೋಜಿಸಿ ತಿಂಗಳು ಪೂರ್ಣ ನಡೆದ ಸ್ಪರ್ಧೆಗಳಿಗೆ ಬೇರೆ ಬೇರೆ ತೀರ್ಪುಗಾರರಿಂದ ಮೌಲ್ಯ ಮಾಪನ ಮಾಡಿಸಿ ಡಿಸೆಂಬರ್ ಒಂದನೇ ತಾರೀಖಿನಂದು ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ನಗರದ ಮಾತಿನ ಮನೆ ಪ್ರಸಿದ್ಧಿಯ ಕವಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತಕರಾದ ಶ್ರೀಯುತ ರಾಸು ವೇಂಕಟೇಶ್ರವರು ಆಗಮಿಸಿದ್ದರು. ಅವರು ನಾಡು ನುಡಿಗಳನ್ನು ಹೇಗೆ ಬೆಳೆಸಬೇಕು ಎಂದು ಹೇಳುತ್ತಾ ಮನೆಯಲ್ಲಿ ಮೊದಲಿಗೆ ಮಕ್ಕಳಿಂದ ಆರಂಭಿಸಿ ಓಣಿ ಬಡಾವಣೆಗಳಲ್ಲಿ ಕನ್ನಡ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಆಯೋಜಿಸಿ ಹೇಗೆ ಬೆಳೆಸಬೇಕು ಅವರು ದೂರದರ್ಶನದಲ್ಲಿ ಕೆಲಸ ಮಾಡುವಾಗ ನಾಡಿನ ಎಲ್ಲರಿಗೂ ಮನೋರಂಜನೆ ಒದಗಿಸುತ್ತಿದ್ದ ದೂರದರ್ಶನದ ಸಿಬ್ಬಂದಿಗಳಿಗಾಗಿ ಹೇಗೆ ಕನ್ನಡ ಸಂಘವನ್ನು ಆರಂಭಿಸಿದರು ಯಾವ ರೀತಿಯಲ್ಲಿ ನಾವು ಕನ್ನಡವನ್ನು ಉಳಿಸಿ ಬೆಳಸಬಹುದು ಎಂಬುದನ್ನು ಸೊಗಸಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಭಾಸಾಪ ಬೆಂಗಳೂರು ನಗರ ಮಹಿಳಾ ಪ್ರಕಾರದ ಅಧ್ಯಕ್ಷರು ಗಮಕಿ ಶ್ರೀಮತಿ ಶಾಂತಾ ನಾಗಮಂಗಲರವರು ಅಭಾಸಾಪ ಹೇಗೆ ನಮ್ಮ ಸಂಸ್ಕೃತಿ ಮತ್ತು ನಾಡು ನುಡಿಗಳ ಕೆಲಸವನ್ನು ಮಾಡುತ್ತಿದೆ ಮತ್ತು ಯಾವ ಯಾವ ರೀತಿಯಲ್ಲಿ ನಾವು ನಾಡು ನುಡಿಗಳ ಸೇವೆಯನ್ನು ಮಾಡಬಹುದು ಎಂದರು.
ಸ್ಪರ್ಧೆಗಳ ಫಲಿತಾಂಶವನ್ನು ನಿರ್ಣಯಿಸಿದ ತೀರ್ಪುಗಾರರು ಬಂದ ಕವಿತೆ, ಕವಿ ಪರಿಚಯ, ಕಥೆ ಮತ್ತು ಪುಸ್ತಕ ವಿಮರ್ಶೆಯ ಬಗೆಗೆ ಮಾತನಾಡಿದರು ಶ್ರೀ ರಾಸು ವೆಂಕಟೇಶರವರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಕೊಟ್ಟರು. 4 ವಾರ ನಡೆದ ಸ್ಪರ್ಧೆಗಳಲ್ಲಿ 3 ಕವಿತೆಗಳಿಗೆ, ಮೂರು ಜನರನ್ನು ಪರಿಚಯಿಸಿದವರಿಗೆ, 3 ಕಥೆಗಾರರಿಗೆ ಹಾಗೂ 3 ಪುಸ್ತಕ ವಿಮರ್ಶೆಗೆ ಬಹುಮಾನ ನೀಡುವುದರ ಜೊತೆಗೆ 6 ಜನ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಯಿತು. ಒಟ್ಟು 25 ಜನ ಸ್ಪರ್ಧಿಗಳು ಭಾಗವಹಿಸಿದ್ದರು.
ಬೆಂಗಳೂರು ನಗರ ದಕ್ಷಿಣ ವಲಯಉಪಾಧ್ಯಕ್ಷರಾದ ಶೀಮತಿ ಶೀಲಾ ಅರಕಲಗೂಡು ಅವರು ಉಪಸ್ಥಿತರಿದ್ದು ಸ್ಪರ್ಧೆಗೆ ಬಂದ ಕವನಗಳನ್ನು ಬಹಳ ಸೊಗಸಾಗಿ ವಿಮರ್ಶಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಅಭಾಸಾಪ ಮಹಿಳಾ ಪ್ರಕಾರ ಬೆಂಗಳೂರಿನ ಸದಸ್ಯೆ ಮೇಧಾ ಪ್ರಹ್ಲಾದಾಚಾರ್ ಜೋಶಿಯವರು ನಡೆಸಿಕೊಟ್ಟರು, ಬೆಂಗಳೂರು ದಕ್ಷಿಣ ಮಹಿಳಾ ಪ್ರಕಾರದ ಅಧ್ಯಕ್ಷರಾದ ಶೀಮತಿ ಮೃದುಲಾ ವಿಜಯೀಂದ್ರರವರು ರಾಜ್ಯೋತ್ಸವ ಕಾರ್ಯಕ್ರಮ ರೂಪುಗೊಂಡು ಇಂದಿನ ಕಾರ್ಯಕ್ರಮದ ಬಗೆಗೆ ಸವಿವರವಾಗಿ ಹೇಳಿ ಭಾಗವಹಿಸಿದವರಿಗೆ ಮತ್ತು ಅತಿಥಿಗಳಿಗೆ ವಂದನಾರ್ಪಣೆಯನ್ನು ಮಾಡಿದರು.
ಬಸವನಗುಡಿಯ ಅಬಲಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಾಸಾಪ ಬೆಂಗಳೂರಿನ ಕೆಲಸವು ಸದಸ್ಯರು ಅಬಲಾಶ್ರಮದ ಕಾರ್ಯಕರ್ತರು ಮತ್ತು ಮಹಿಳೆಯರು ಬೆಂಗಳೂರು ದಕ್ಷಿಣ ಮಹಿಳಾ ಪ್ರಕಾರದ ಕಾರ್ಯದರ್ಶಿ ಮಾಧುರಿ ದೇಶಪಾಂಡೆಯವರು ಉಪಸ್ಥಿತರಿದ್ದರು.ಪ್ರಾರ್ಥನೆ ಗೀತೆ ಮತ್ತು 2-3 ಕನ್ನಡದ ಗೀತೆಗಳನ್ನು ಸದಸ್ಯೆ ಶ್ರೀಮತಿ ಜ್ಯೋತಿಯವರು ಸುಶ್ರಾವ್ಯವಾಗಿ ಹಾಡಿದರು. ಸೈಕ್ಲೋನ್ ಮಳೆಯ ನಡುವೆಯೂ ತುಂಬಿದ ಸಭಾಂಗಣ ಕಾರ್ಯಕ್ರಮ ಕನ್ನಡ ಪ್ರೇಮವನ್ನು ಪ್ರದರ್ಶಿಸಿತು.