ಬೆಂಗಳೂರು: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ವರ್ಗಾವಣೆಯಾಗಿದ್ದ ಹಣ ಲೋಕಸಭೆ ಚುನಾವಣೆ ಸಂದರ್ಭ ಹೆಂಡ, ಮದ್ಯ ಖರೀದಿಗೆ ಬಳಕೆಯಾಗಿತ್ತು ಎಂಬ ಜಾರಿ ನಿರ್ದೇಶನಾಲಯದ ಪ್ರಕಟಣೆ ಪ್ರತಿಪಕ್ಷ ಬಿಜೆಪಿಯನ್ನು ಕೆರಳಿಸಿದೆ. ಈಗಾಗಲೇ ಹಗರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜೀನಾಮೆಗೆ ಆಗ್ರಹಿಸಿದ್ದ ಬಿಜೆಪಿ ಈಗ ಮತ್ತಷ್ಟು ವಾಗ್ದಾಳಿ ನಡೆಸಿದೆ.
ಸಿಎಂ ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಲಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ಹಣ ಕಳ್ಳ ಕಾಕರ ನಶೆ ಏರಿಸುವ ಹೆಂಡ,
ಸಾರಾಯಿ ಪಾಲಾಗಿದೆ ಎಂದರೆ ತಮ್ಮ ಕರುಳು ಕಿತ್ತುಬರುವುದಿಲ್ಲವೇ ಸಿಎಂ ಸಿದ್ದರಾಮಯ್ಯನವರೇ? ಇದೇನಾ ತಾವು ಪ್ರತಿಪಾದಿಸುವ ಸಾಮಾಜಿಕ ನ್ಯಾಯ? ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಪರಿಶಿಷ್ಟ ಪಂಗಡಗಳ ಜನರ ಕ್ಷಮೆ ಕೇಳಿ. ರಾಜೀನಾಮೆ ಕೊಟ್ಟು ಪ್ರಾಯಶ್ಚಿತ ಮಾಡಿಕೊಳ್ಳಿ. ದಲಿತ ಸಮುದಾಯ ನಿಮ್ಮ ದ್ರೋಹವನ್ನ ಯಾವತ್ತಿಗೂ ಕ್ಷಮಿಸುವುದಿಲ್ಲ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.