ಖ್ಯಾತ ಕಥಕ್ ನೃತ್ಯ ಕಲಾವಿದೆಯರಲ್ಲಿ `ಸ್ಪೇಸ್’ ನೃತ್ಯಶಾಲೆಯ ಸಂಸ್ಥಾಪಕ ನಿರ್ದೇಶಕಿ ಅಂಜನಾ ಗುಪ್ತ ಅವರ ಹೆಸರು ಜನಪ್ರಿಯವಾಗಿದೆ. ಈಕೆ ಬದ್ಧತೆ ಮತ್ತು ಉತ್ತಮ ಶಿಕ್ಷಣ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ನೂರಾರು ಮಕ್ಕಳಿಗೆ ಕಥಕ್ ನೃತ್ಯ ಶಿಕ್ಷಣ, ಸಮಗ್ರ ತರಬೇತಿಯನ್ನು ಶಿಸ್ತಿನಿಂದ ನೀಡುವ ಸಮರ್ಥ ಗುರುವಾಗಿದ್ದಾರೆ ಅಂಜನಾ. ಇವರು ನೀಡುವ ಶಿಕ್ಷಣದಲ್ಲಿ ಕಲಾತ್ಮಕತೆ, ಸೌಂದರ್ಯ ಮತ್ತು ಸೃಜನಾತ್ಮಕತೆಯ ಪ್ರಯೋಗ ದೃಷ್ಟಿ ಪ್ರಮುಖವಾಗಿವೆ.
ಗುರುದ್ವಯರಾದ ಅಂಜನಾ ಮತ್ತು ಅವರ ಶಿಷ್ಯೆ ಹಾಗೂ ಮಗಳಾದ ಉತ್ತಮ ನೃತ್ಯಗಾರ್ತಿ ಶ್ರುತಿ ಗುಪ್ತ ( ಕ್ರಿಯೇಟಿವ್ ಡೈರೆಕ್ಟರ್- ಸ್ಪೇಸ್) ಇವರ ನುರಿತ ಗರಡಿಯಲ್ಲಿ ತಯಾರಾದ ನೃತ್ಯಶಿಲ್ಪ ಕು. ಅನುಷ್ಕ ಪ್ರಭು ಬಾಲ ಪ್ರತಿಭೆ. ಕರ್ನಾಟಕ ಜ್ಯೂನಿಯರ್ ಮತ್ತು ರವೀಂದ್ರ ಭಾರತಿ ಸೀನಿಯರ್ ಡಿಪ್ಲೊಮಾ ಪದವಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೆರ್ಗಡೆಯಾಗಿರುವ ಇವಳು, `ಸ್ಪೇಸ್ ಕಥಕ್ ನೃತ್ಯೋತ್ಸವ’ಗಳಲ್ಲಿ ನರ್ತಿಸಿ ಹಾಗೂ ಇನ್ನಿತರ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸಿ ಅನುಭವ ಹೊಂದಿದ್ದಾಳೆ. ಕಲಾತ್ಮಕ ನೃತ್ಯದ ಆಯಾಮವನ್ನು ಪಡೆದುಕೊಂಡಿರುವ ಇವಳು.
ಡಿಸೆಂಬರ್ 1 `ಭಾನುವಾರದಂದು ಸಂಜೆ 6.30 ಗಂಟೆಗೆ ಕೋರಮಂಗಲದ ಕ್ಲಬ್ ಆವರಣದಲ್ಲಿರುವ `ಪ್ರಭಾತ್ ಕಲಾದ್ವಾರಕ’ ಮಂದಿರದಲ್ಲಿ ವಿದ್ಯುಕ್ತವಾಗಿ ಕಥಕ್ `ಸಮರ್ಪಣ್’ ಮಾಡಲಿದ್ದಾಳೆ. ಈ ಮನಮೋಹಕ ಕಲಾವಿದೆಯ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
ಮಂಗಳೂರಿನ ಸಮೀಪದ ಗುರ್ಪುರ್ ನ ಶ್ರೀ ಪ್ರಕಾಶ್ ಪ್ರಭು ಮತ್ತು ಮೀನಾಕ್ಷಿ ಪ್ರಭು ಅವರ ಪುತ್ರಿ ಅನುಷ್ಕಗೆ ಬಾಲ್ಯದಿಂದಲೂ ನೃತ್ಯ ಎಂದರೆ ತುಂಬಾ ಒಲವು. ಮಗಳ ಆಸಕ್ತಿಯನ್ನು ಗಮನಿಸಿ ಹೆತ್ತವರು ತಮ್ಮ ಐದುವರ್ಷದ ಮಗಳನ್ನು ಕಥಕ್ ನೃತ್ಯ ಕಲಿಯಲು ಖ್ಯಾತ ಗುರು ಅಂಜನಾ ಗುಪ್ತ ಅವರಲ್ಲಿ ಸೇರ್ಪಡೆ ಮಾಡಿದರು.
ಗುರುಗಳೊಂದಿಗೆ, ಗುರು ಪುತ್ರಿ ಶ್ರುತಿ ಕೂಡ ಪುಟ್ಟ ಬಾಲೆಗೆ ನೃತ್ಯದ ಹೆಜ್ಜೆಗಳನ್ನು ಕಲಿಸಿ, ತಿದ್ದಿ-ತೀಡಿ ನೃತ್ಯಗಾರ್ತಿಯಾಗುವತ್ತ ತರಬೇತಿ ನೀಡಿದ್ದಾರೆ. ಚುರುಕು ಮತಿ ಅನುಷ್ಕ ಬಹು ಬೇಗ ನೃತ್ಯವನ್ನು ಕಲಿತು ನಾಡಿನಾದ್ಯಂತ ಅನೇಕ ಪ್ರದರ್ಶನಗಳನ್ನು ಕೊಡುವಷ್ಟು ಸಮರ್ಥಳಾದಳು. ಹೆಚ್ಚಿನ ಕಲಿಕೆಯನ್ನು ನೃತ್ಯ ದಿಗ್ಗಜರಾದ ಪಂಡಿತ್ ಬಿರ್ಜು ಮಹಾರಾಜ್, ಗುರು ಮೌಲಿಕ್ ಮತ್ತು ಪಾರಿಖ್, ಪಾರ್ವತಿ ದತ್ತ ಮುಂತಾದವರ ವಿಶೇಷ ಪ್ರಾತ್ಯಕ್ಷಿಕೆ, ಕಾರ್ಯಾಗಾರಗಳಿಂದ ಜ್ಞಾನವನ್ನು ಪಡೆದುಕೊಂಡಳು.
ಇದಕ್ಕೆ ವಿಶೇಷ ಅವಕಾಶ ಒದಗಿಸಿದ್ದು `ಸ್ಪೇಸ್’ ನೃತ್ಯ ಸಂಸ್ಥೆ. ಇದರಿಂದ ಅನುಷ್ಕಾಗೆ ವಿಪುಲ ನೃತ್ಯಾವಕಾಶಗಳು, ವೇದಿಕೆಗಳು ಒದಗಿದವು. ಶಿವರಾತ್ರಿ ಸಂದರ್ಭದಲ್ಲಿ ಪ್ರತಿಷ್ಠಿತ ತಂಜಾವೂರಿನ ಬೃಹನ್ ನಾಟ್ಯಾಂಜಲಿ, ಜಿ- 20, ಚಿನ್ನ ಕಲಾ ನಾದಂ, ಉನ್ನತಿ ಮತ್ತು ನೀಮ್ರಾಣ ಮುಂತಾದ ನೃತ್ಯೋತ್ಸವಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದಾಳೆ ಅನುಷ್ಕ.
ವಿದ್ಯಾಭ್ಯಾಸದಲ್ಲೂ ಮುಂದಿರುವ ಅನುಷ್ಕ, ಕೇಂದ್ರೀಯ ವಿದ್ಯಾಲಯ ಎನ್.ಎ.ಎಲ್. ಮತ್ತು ವ್ಯಾಲಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದು, ಈಗ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಸೈಕಾಲಜಿ ವಿಷಯವನ್ನು ಆಯ್ಕೆ ಮಾಡಿಕೊಂಡು, ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ. ನೃತ್ಯದ ಬಗೆ ಅದಮ್ಯ ಒಲವು ಹೊಂದಿರುವ ಅನುಷ್ಕಾ ಓದಿನ ಜೊತೆ ಕಲೆಯನ್ನೂ ಸಮರಸವಾಗಿ ತೂಗಿಸಿಕೊಂಡು ಹೋಗುತ್ತಿರುವ ಪ್ರತಿಭಾನ್ವಿತೆ. ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸನ್ನು ಹೊಂದಿದ್ದಾಳೆ. ಕ
ಥಕ್ ಪಯಣದಲ್ಲಿ ರಂಗಪ್ರವೇಶ ಎಂಬ ಮೈಲಿಗಲ್ಲಿನ ಪ್ರಮುಖ ಕ್ಷಣಗಳ ಬಗ್ಗೆ ಅಸೀಮ ಉತ್ಸಾಹದಿಂದಿರುವ ಅನುಷ್ಕಾ, ಅದಕ್ಕೆ ಅಗತ್ಯವಿರುವ ಸಕಲ ಸಿದ್ಧತೆಗಳನ್ನೂ ಅತುಲ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಸಾಧಿಸುತ್ತಿದ್ದಾಳೆ. ಕೊನೆಯಿಲ್ಲದ ಈ ಕಲಿಕೆ ಮತ್ತು ಸಾಧನೆಯ ಪಥದಲ್ಲಿ ನಡೆಯುವ ಸಂಕಲ್ಪ ಮಾಡಿರುವ ಅನುಷ್ಕಾಗೆ ಸರ್ವ ಶುಭಾಶಯಗಳು. ಅಂತರರಾಷ್ಟ್ರೀಯ ನೃತ್ಯ ಕಲಾವಿದೆ ಮತ್ತು ಗುರುವಾಗಿರುವ ಅಂಜನಾ ಗುಪ್ತ ಅವರ ಅನುಪಮ ನೃತ್ಯಸಾಧನೆ ಮತ್ತು ಅವರ ಉದಯೋನ್ಮುಖ ಕಲಾವಿದರ ಕೊಡುಗೆಗೆ ಅಭಿನಂದನೆಗಳು.