ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಚಟುವಟಿಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇತ್ತ ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ಪರ ಜನ ಸೇರಿಸಿ ಸಮಾವೇಶ ಮಾಡಲು ಮಾಜಿ ಸಚಿವ ಎನ್.ಪಿ. ರೇಣುಕಾಚಾರ್ಯ ಮತ್ತು ಅವರ ಸಹಚರರು ಲಿಂಗಾಯತ ವೀರಶೈವರ ಒಗ್ಗೂಡಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ರೇಣುಕಾಚಾರ್ಯ ಮತ್ತು ತಂಡದವರು ಸಿದ್ಧತೆ ನಡೆಸಿದ್ದಾರೆ.
ಇದಕ್ಕೆ ಪರ್ಯಾಯವಾಗಿ ತಾವೇನು ಕಡಿಮೆಯಿಲ್ಲ ಎಂಬಂತೆ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡದವರು ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಯುಗಾದಿ ಹಬ್ಬ ಕಳೆದ ತಕ್ಷಣ ಯತ್ನಾಳ್ ಮತ್ತು ಸಂಗಡಿಗಳು ಚಾಮರಾಜನಗರದಿಂದ ಬಸವಕಲ್ಯಾಣದವರೆಗೆ ಪ್ರವಾಸ ಮಾಡಲು ಕಾರ್ಯಕ್ರಮ ರೂಪಿಸುತ್ತಿದ್ದಾರೆ.ಪ್ರವಾದ ವೇಳೆ ಹಿಂದೂ ಸಮಾವೇಶದ ಹೆಸರಿನಲ್ಲಿ ಅಲ್ಲಲ್ಲಿ ವೀರಶೈವ ಲಿಂಗಾಯತರ ಸಭೆಗಳನ್ನು ನಡೆಸಲು ಸಹ ಮುಂದಾಗಿದ್ದು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಲಿಂಗಾಯತ ನಾಯಕ ಅಲ್ಲ ಎಂಬ ಸಂದೇಶವನ್ನು ರವಾನಿಸಲು ಮುಂದಾಗಿದ್ದಾರೆ. ಈ ಪ್ರವಾಸದ ನಂತರ ಯಡಿಯೂರಪ್ಪ ಪರ ನಡೆಯುವ ದಾವಣಗೆರೆ ಸಮಾವೇಶ ಮುಗಿಯುತ್ತಿದ್ದಂತೆ ದಾವಣಗೆರೆಯಲ್ಲೇ ಪರ್ಯಾಯ ಸಮಾವೇಶವನ್ನು ನಡೆಸಲು ಯತ್ನಾಳ್ ತಂಡ ನಿರ್ಧರಿಸಿದೆ.
ಇತ್ತೀಚೆಗೆ ಯತ್ನಾಳ್ ತಂಡದವರು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವರಿಷ್ಠರು ಪಕ್ಷದಲ್ಲಿ ಯಾವುದೇ ತೊಡಕಾಗದಂತೆ ನಿಮಗೆ ಪ್ರಮುಖವಾದ ಹುದ್ದೆ ನೀಡಲಾಗುವುದು. ಪಕ್ಷ ಸಂಘಟನೆ ಮಾಡಿ ಎಂದು ನಿರ್ದೇಶನ ನೀಡಿದ್ದರು. ಆದರೂ ಇದಕ್ಕೆ ಒಪ್ಪದ ಯತ್ನಾಳ್ ಬಣ ತಮ್ಮ ಪಟ್ಟು ಸಡಿಲಿಸದೆ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಅತ್ತ ವರಿಷ್ಠರಿಗೆ ಇದು ತಲೆ ನೋವಿನ ವಿಷಯವಾಗಿ ಪರಿಣಮಿಸಿದ್ದು, ಒಂದು ವೇಳೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರ ಸ್ಥಾನದಿಂದ ಬದಲಾಯಿಸಿದರೆ ಬೇರೆ ರಾಜ್ಯಗಳಲ್ಲೂ ಇಂತಹದೇ ಪರಿಸ್ಥಿತಿ ನಿರ್ಮಾಣ ವಾಗುವುದು ಎಂಬ ಜಿಜ್ಞಾಸೆಯಲ್ಲಿದ್ದಾರೆ ಎನ್ನಲಾಗಿದೆ.