ಐಟಿ ಕ್ಷೇತ್ರದಲ್ಲಿ ಬೆಂಗಳೂರು ದೊಡ್ಡ ಹೆಸರು. ಪ್ರಪಂಚದಾದ್ಯಂತ ಐಟಿ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಬೆಂಗಳೂರಿನ ಬಗ್ಗೆ ಗೊತ್ತೇ ಇರುತ್ತದೆ. ಭಾರತದ 40% ಐಟಿ ರಫ್ತು ಬರೀ ಇಲ್ಲಿಂದಲೇ ಆಗುತ್ತಿದೆ. ಬೆಂಗಳೂರಿನಲ್ಲಿ ಏನಾದರೂ ಸ್ವಲ್ಪ ವ್ಯತ್ಯಯವಾದರೂ ಜಗತ್ತಿನಾದ್ಯಂತ ಸುದ್ದಿಯಾಗುತ್ತದೆ.
ಐಟಿ ನಮ್ಮಲ್ಲಿ ಆರಂಭವಾಗಿದ್ದು ಹತ್ತೊಂಬತ್ತನೇ ಶತಮಾನದ ಕೊನೆಯ ಘಟ್ಟದಲ್ಲಾದರೂ, ಇದರ ಹಿನ್ನಲೆಯನ್ನು ನೋಡಬೇಕಾದರೆ 1913ರಕ್ಕೆ ಹೋಗಬೇಕಾಗುತ್ತದೆ. ಇಡೀ ಭಾರತದಲ್ಲಿ ಸರಕಾರ 2009ರಲ್ಲಿ ರೈಟ್ ಟು ಎಜುಕೇಷನ್ ಆಕ್ಟ್ ಮೂಲಕ ಸರ್ವರಿಗೂ ಕಡ್ಡಾಯ ಪ್ರಾಥಮಿಕ ವಿದ್ಯಾಭ್ಯಾಸದ ಕಾಯಿದೆ ಜಾರಿಗೊಳಿಸಿತು. ಆದರೆ ಆಗಿನ ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 1913ರಲ್ಲೇ ಕಡ್ಡಾಯ ಪ್ರಾಥಮಿಕ ಶಿಕ್ಷಣದ ಕಾನೂನನ್ನು ತಂದಿದ್ದರು.
ಇಡೀ ಭಾರತಕ್ಕೆ ಶಿಕ್ಷಣದ ಅನಿವಾರ್ಯತೆ ಅರಿವಾಗುವ ನೂರು ವರ್ಷಗಳ ಮೊದಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಬಗ್ಗೆ ಯೋಚಿಸಿದ್ದರು. ಆ ಮೂಲಕ ವಿದ್ಯಾಭ್ಯಾಸದೆಡೆಗಿನ ಚಿಂತನೆಯನ್ನು ಆಗಲೇ ಹುಟ್ಟುಹಾಕಿದ್ದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಕಾಲೇಜುಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಜಾಗದ ವ್ಯವಸ್ಥೆಯನ್ನೂ ಮೈಸೂರು ಮಹಾರಾಜರೇ ಮಾಡಿದ್ದರು.
ಮೈಸೂರು ಮಹಾರಾಜರಿಗೆ ಇದ್ದ ದೂರದೃಷ್ಟಿಯ ಕಾರಣದಿಂದ, ಭಾರತ ಸ್ವತಂತ್ರವಾದಾಗ ಭಾರತದ ಸಾಕ್ಷರತೆಯ ಪ್ರಮಾಣ 15%ಗಿಂತಲೂ ಕೆಳಗಿದ್ದರೆ, ಬೆಂಗಳೂರಿನ ಸಾಕ್ಷರತೆಯ ಪ್ರಮಾಣ 40%ಗಿಂತಲೂ ಮೇಲಿತ್ತು. ಈ ಕಾರಣದಿಂದ ಬೆಂಗಳೂರಿನಲ್ಲಿ ಹೇರಳವಾದ ಪ್ರತಿಭೆಗಳ ಲಭ್ಯತೆ ಇತ್ತು. ಅಂದಿನ ಭಾರತ ಸರಕಾರ ಅನಿವಾರ್ಯವಾಗಿ ಬಹಳಷ್ಟು ಸರಕಾರೀ ಕಾರ್ಖಾನೆಗಳನ್ನು ಬೆಂಗಳೂರಿನಲ್ಲೇ ಸ್ಥಾಪಿಸಬೇಕಾಗಿ ಬಂದಿತ್ತು. ಬೇರೆಡೆ ಸ್ಥಾಪಿಸಿದ್ದರೆ ಅವುಗಳಿಗೆ ಬೇಕಾದ ನುರಿತ ಉದ್ಯೋಗಿಗಳು ಸಿಗುತ್ತಿರಲಿಲ್ಲ. ಆಗ ಸ್ಥಾಪನೆ ಆದದ್ದೇ ಇಂಡಿಯನ್ ಟೆಲಿಕಾಂ ಇಂಡಸ್ಟ್ರೀಸ್, ಎಚ್ಎಎಲ್, ಭಾರತ್ ಎಲೆಕ್ಟ್ರೋನಿಕ್ಸ್, ಬಿಎಚ್ಇಎಲ್ ಇತ್ಯಾದಿ. ಹೀಗಾಗಿ ಸ್ವತಂತ್ರ ಭಾರತದಲ್ಲಿ ನಮ್ಮ ನಾಡು ಕೈಗಾರಿಕಾ ನಾಡಾಗಿ ಗುರುತಿಸಲ್ಪಟ್ಟಿತ್ತು.
ಹಣದ ಹೊಳೆ ನಮ್ಮ ನಾಡಿಗೆ ಹರಿಯಲು ಆರಂಭವಾಗಿತ್ತು.ಎರಡನೇ ವಿಶ್ವಯುದ್ಧದ ಗೆಲುವಿನ ನಂತರ ಅಮೆರಿಕ ಬಳಿ ಸಾಕಷ್ಟು ಸಂಪತ್ತಿತ್ತು. ಹೀಗಾಗಿ ಕೈಗಾರಿಕೆಯ ಬೆಳವಣಿಗೆಗೆ ವೇಗ ಸಿಕ್ಕಿತು. ಕೈಗಾರಿಕೆಗಳು ಬೆಳೆದಂತೆ ಕಾರ್ಮಿಕರ ಬೇಡಿಕೆ ಹೆಚ್ಚತೊಡಗಿತು. ಇದರಿಂದಾಗಿ ಕಾರ್ಮಿಕರ ವೇತನ ಯಾವ ಮಟ್ಟಿಗೆ ಹೆಚ್ಚಿತೆಂದರೆ, ಅಮೆರಿಕದಲ್ಲಿ ತಯಾರಿಸುವುದು ದುಸ್ತರವಾಗತೊಡಗಿತ್ತು. ಹೀಗಾಗಿ ಅಮೆರಿಕದ ಕಂಪನಿಗಳು ಕಡಿಮೆ ವೇತನದ ದೇಶಗಳಲ್ಲಿ ವಸ್ತುಗಳನ್ನು ತಯಾರಿಸಲು ಮುಂದಾದವು. ಹೀಗೆ ಔಟ್ ಸೋರ್ಸ್ ಅಥವಾ ಹೊರಗುತ್ತಿಗೆ ಎನ್ನುವ ಪ್ರಕ್ರಿಯೆ ಆರಂಭವಾಯ್ತು.
ಯಾವಾಗ ಜಗತ್ತಿನಲ್ಲಿ ಐಟಿ ಕ್ಷೇತ್ರದ ಬೇಡಿಕೆ ಹೆಚ್ಚಾಯ್ತೋ, ಹೊರಗುತ್ತಿಗೆಯು ಐಟಿ ಕ್ಷೇತ್ರಕ್ಕೂ ವ್ಯಾಪಿಸಿತು. ಭಾರತ, ಅದರಲ್ಲೂ ಮುಖ್ಯವಾಗಿ ನಮ್ಮ ಬೆಂಗಳೂರು ಈ ಬೇಡಿಕೆಯನ್ನು ಕೈಚಾಚಿ ತಬ್ಬಿಕೊಂಡಿತು. ಭಾರತ ಸರಕಾರವು ಐಟಿ ಕ್ಷೇತ್ರ ನಮ್ಮ ದೇಶದಲ್ಲಿ ವ್ಯಾಪಿಸಲು ಬೇಕಾದ ಸಡಿಲಿಕೆಯನ್ನು ಮಾಡಿತು. ಈ ಅವಕಾಶವನ್ನು ಕರ್ನಾಟಕದ ಅಂದಿನ ಸರಕಾರ ಚೆನ್ನಾಗಿಯೇ ಬಳಸಿಕೊಂಡಿತು. ಐಟಿ ಪಾರ್ಕ್ ಗಳನ್ನು ಸ್ಥಾಪಿಸಿ, ತೆರಿಗೆ ವಿನಾಯಿತಿಗಳನ್ನು ಕೊಟ್ಟಿತು. ಸ್ಪೆಷಲ್ ಎಕನಾಮಿಕ್ (ಎಸ್ ಈ ಜಡ್) ಗಳನ್ನು ಸ್ಥಾಪಿಸಿ ರಫ್ತಾಗುವ ವಸ್ತುಗಳಿಗೆ ತೆರಿಗೆಗಳನ್ನು ಸಡಿಲಿಸಿತು. ಈ ಎಲ್ಲಾ ಕಾರಣಗಳಿಂದ ಈಗಾಗಲೇ ವಿದ್ಯಾವಂತರಿಂದ ತುಂಬಿದ್ದ ಬೆಂಗಳೂರು ಐಟಿ ಕ್ಷೇತ್ರದ ಬೆಳವಣಿಗೆಗೆ ಒಳ್ಳೆಯ ವೇದಿಕೆಯಾಯ್ತು.
ಬೆಂಗಳೂರಿಗೆ ಇದ್ದ ಇನ್ನೊಂದು ಅತಿ ದೊಡ್ಡ ಅನುಕೂಲವೆಂದರೆ ಇಲ್ಲಿಯ ಹವಾಮಾನ. ದೇಶದ ಇತರ ನಗರಗಳಲ್ಲಿ ಇದ್ದ ಅತಿರೇಕದ ಹವಾಮಾನದ ಸಮಸ್ಯೆ ಬೆಂಗಳೂರಿಗೆ ಇರಲಿಲ್ಲ, ಪದೇ ಪದೇ ಎರಗುವ ಸೈಕ್ಲೋನ್ ಭೀತಿಯೂ ಇರಲಿಲ್ಲ.1981ರಲ್ಲಿ ಪುಣೆಯಲ್ಲಿ ಆರಂಭವಾದ ಇನ್ಫೋಸಿಸ್, 1983ರಲ್ಲೇ ಇದನ್ನು ಬೆಂಗಳೂರಿಗೆ ವರ್ಗಾಯಿಸಿತು. ಇದರ ಜೊತೆ ಜೊತೆಗೆ ಜಗತ್ತಿನ ಹಲವಾರು ಐಟಿ ಕಂಪನಿಗಳು ಬೆಂಗಳೂರಿಗೆ ಬಂದವು. ಮೈಕ್ರೋಸೋಫ್ಟ್, ಗೂಗಲ್, ಆಪಲ್, ಟಿಸಿಎಸ್, ಅಡೋಬ್, ಸಿಸ್ಕೋ, ಅಕ್ಸೆಂಚರ್, ಐಬಿಎಂ, ವಿಪ್ರೋ , ಹನಿವೆಲ್, ಒರಾಕಲ್, ಎಸ್ ಎ ಪಿ, ಸಿಮನ್ಸ್ ಹೀಗೆ ಜಗತ್ತಿನ ಹೆಸರಾಂತ ಐಟಿ ದಿಗ್ಗಜರೆಲ್ಲ ಬೆಂಗಳೂರಿನಲ್ಲಿ ತಮ್ಮ ಶಾಖೆಯನ್ನು ಹೊಂದಿದ್ದಾರೆ. ಈಗಲಂತೂ ಬೆಂಗಳೂರಿನಲ್ಲಿ ತನ್ನ ಶಾಖೆಯನ್ನು ಹೊಂದಿರುವುದು ಐಟಿ ಕಂಪನಿಗಳಿಗೆ ಹೆಮ್ಮೆಯ ವಿಚಾರ.
ಐಟಿ ಕಂಪನಿಗಳು ಈಗಾಗಲೇ ಪ್ರಸಿದ್ಧಿಯಲ್ಲಿರುವ ಬೆಂಗಳೂರನ್ನೇ ನೆಚ್ಚಿಕೊಳ್ಳಲು ಬಯಸುತ್ತವೆ. ಇನ್ಫೋಸಿಸ್ ಮೈಸೂರು, ಮಂಗಳೂರಿಗೆ ವಿಸ್ತರಿಸುವ ಪ್ರಯತ್ನ ನಡೆಸಿದೆ, ಆದರೆ ಬೇರೆ ಕಂಪನಿಗಳು ಈ ವಿಷಯದಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿಲ್ಲ. ಕರ್ನಾಟಕ ಸರಕಾರವು ಅದನ್ನು ರಾಜ್ಯದೆಲ್ಲೆಡೆ ವಿಸ್ತರಿಸಲು ಪ್ರೇರೇಪಿಸುವಂತಹ ವೇದಿಕೆಯನ್ನು ಕಲ್ಪಿಸಬೇಕು. ಐಟಿ ಕಂಪನಿಗಳು ಕಡಿಮೆ ಶ್ರಮದಲ್ಲಿ ರಾಜ್ಯದ ಇತರ ಭಾಗಗಳಿಗೂ ವ್ಯಾಪಿಸುವಂತೆ ಮಾಡುವಲ್ಲಿ ರಾಜ್ಯ ಸರಕಾರ ತೋರುತ್ತಿರುವ ನಿರುತ್ಸಾಹವು ಬೆಂಗಳೂರಿನ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಬೆಂಗಳೂರಿಗೆ ಸಮೀಪದಲ್ಲೇ ಇರುವ ತುಮಕೂರು, ಹಾಸನ, ಮೈಸೂರು, ಕೋಲಾರಕ್ಕೆ ವ್ಯಾಪಿಸಲು ಹೆಚ್ಚು ಕಷ್ಟವಾಗದು. ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿಯಂತಹ ನಗರಗಳಲ್ಲಿ ಸರಕಾರ ಮುತುವರ್ಜಿ ವಹಿಸಿ ಈ ನಿಟ್ಟಿನಲ್ಲಿ ಕೆಲಸ ಮಾಡದೇ ಹೋದರೆ ರಾಜ್ಯದ ಜನಸಾಂದ್ರತೆಯ ಅನುಪಾತ ಅಲ್ಲೋಲ ಕಲ್ಲೋಲವಾಗಲು ಹೆಚ್ಚು ಕಾಲ ಬೇಕಿಲ್ಲ.