ಮೆಲ್ಬರ್ನ್: ಗ್ಲಾಸ್ಗೋ ದಲ್ಲಿ ನಡೆಯುವ 2026ರ ಕಾಮನ್ವೆಲ್ತ್ ಗೇಮ್ಸ್ನಿಂದ ಹಾಕಿಯನ್ನು ಹೊರಗಿಡಲಾಗುವುದು ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದು ಭಾರತದಂಥ ಹಾಕಿಪ್ರಿಯ ದೇಶಗಳಲ್ಲಿ ತಲ್ಲಣ ಮೂಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್), ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
1998ರಲ್ಲಿ ಕಾಮನ್ವೆಲ್ತ್ ಗೇಮ್ಸ್ ಆರಂಭವಾದಾಗಿನಿಂದಲೂ ಹಾಕಿ ಈ ಕ್ರೀಡಾಕೂಟದಲ್ಲಿ ತಪ್ಪದೇ ಕಾಣಿಸಿಕೊಂಡಿತ್ತು. ಆದರೆ ಗೇಮ್ಸ್ನ ಆರ್ಥಿಕ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಗ್ಲಾಸ್ಗೋ ಗೇಮ್ಸ್ ಸಂಘಟಕರು ಹಾಕಿ, ನೆಟ್ಬಾಲ್ ಮತ್ತು ರೋಡ್ ರೇಸ್ ಸ್ಪರ್ಧೆಯನ್ನು ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕೂಟದ ಕ್ರೀಡಾ ಯಾದಿ ಮಂಗಳವಾರ ಪ್ರಕಟಗೊಳ್ಳಲಿದೆ.
ಹಣಕಾಸು ಸಮಸ್ಯೆಯಿಂದ ಆಸ್ಟ್ರೇಲಿಯದ ವಿಕ್ಟೋರಿಯಾ 2026ರ ಕ್ರೀಡಾಕೂಟದಿಂದ ಹಿಂದೆ ಸರಿದ ಕಾರಣ ಇದು ಗ್ಲಾಸ್ಗೋ ಪಾಲಾಗಿತ್ತು.ಇನ್ನೆರಡು ದಿನಗಳಲ್ಲಿ ಇದರ ಪರಿಪೂರ್ಣ ಚಿತ್ರಣ ಸಿಗಲಿದೆ. ಸಿಜಿಎಫ್ನಿಂದ ಅಧಿಕೃತ ಪ್ರಕಟನೆ ಹೊರಬೀಳದ ಹೊರತು ನಾವೇನೂ ಪ್ರತಿಕ್ರಿಯೆ ನೀಡುವ ಹಾಗಿಲ್ಲ ಎಂಬುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ, ಆಸೀಸ್ಗೆ ನಷ್ಟ: ಹಾಕಿಯನ್ನು ಹೊರಗಿಟ್ಟರೆ ಭಾರತ, ಆಸ್ಟ್ರೇಲಿಯ ತಂಡಗಳಿಗೆ ಭಾರೀ ನಷ್ಟ ಎಂಬುದರಲ್ಲಿ ಅನುಮಾನವಿಲ್ಲ. ಭಾರತದ ಪುರುಷರ ತಂಡ ಈವರೆಗೆ 5 ಪದಕ ಜಯಿಸಿದೆ (3 ಬೆಳ್ಳಿ, 2 ಕಂಚು). ವನಿತಾ ತಂಡ 2000ದ ಆವೃತ್ತಿಯ ಚಾಂಪಿಯನ್ ಆಗಿದ್ದು, ಒಟ್ಟು 3 ಪದಕ ಗೆದ್ದಿದೆ.
ಆಸ್ಟ್ರೇಲಿಯದ್ದು ದಾಖಲೆ ಸಾಧನೆ. ಆಸೀಸ್ ಪುರುಷರ ತಂಡ ದಾಖಲೆ 7 ಬಾರಿ ಚಿನ್ನ ಗೆದ್ದಿದೆ. ವನಿತೆಯರು 4 ಸಲ ಚಾಂಪಿಯನ್ ಆಗಿದ್ದಾರೆ.