ಚಿಕ್ಕಬಳ್ಳಾಪುರ: ಕೈಗಾರಿಕೆಗಳ ಹೆಸರಿನಲ್ಲಿ ಕೆಐಎಡಿಬಿ ರೈತ ಫಲವತ್ತಾದ ಭೂಮಿಯನ್ನು ಖಸಿದುಕೊಂಡು ಬಂಡವಾಳಶಾಹಿಗಳಿಗೆ ನೀಡುವ ಏಜೆನ್ಸಿಯಂತೆ ವರ್ತಿಸುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ಉದ್ದೇಶಕ್ಕೆ ಬಳಕೆ ಮಾಡಲು ಬಿಡುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನುಡಿದರು.
ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರೈತರಿಂದ ಕೃಷಿ ಭೂಮಿಯನ್ನು ಸ್ವಾದೀನಪಡಿಸಿಕೊಂಡು ಉಳ್ಳವರಿಗೆ ನೀಡುವ ಕೆಐಎಡಿಬಿ ರಿಯಲ್ಎಸ್ಟೇಟ್ ಏಜೆನ್ಸಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಕಳೆದ 20 ವರ್ಷಗಳಲ್ಲಿ ರೈತರಿಂದ ಕಸಿದುಕೊಂಡ 2.5 ಲಕ್ಷ ಎಕರೆ ಪ್ರದೇಶದಲ್ಲಿ ಶೇ.25 ರಷ್ಟು ಭೂಮಿಯನ್ನು ಕೈಗಾರಿಕೆಗಳ ಉದ್ದೇಶಕ್ಕೆ ಬಳಸಿಲ್ಲ. ಎಲ್ಲವೂ ರಿಯಲ್ ಎಸ್ಟೇಟ್ ಕುಳಗಳ ಪಾಲಾಗಿದೆ ಎಂದು ಆರೋಪಿಸಿದರು.
ಕೈಗಾರಿಕೆಗಳ ಸ್ಥಾಪನೆಗೆ ರೈತ ಸಂಘವು ಎಂದಿಗೂ ಅಡ್ಡಿ ಮಾಡುವುದಿಲ್ಲ, ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ರೈತ ಸಂಘವು ಬಿಡುವುದಿಲ್ಲ. ಜಂಗಮಕೋಟೆ ಪ್ರದೇಶ ಸೇರಿ ರಾಜ್ಯದ ಇತರೆಡೆ ಕೃಷಿ ಭೂಮಿಯ ವಶಕ್ಕೆ ಪಡೆಯುವ ಮುನ್ನ ಲ್ಯಾಂಡ್ ಆಡಿಟ್ ವರದಿ ತಯಾರಿಸಬೇಕು. ಅಲ್ಲಿಯವರೆಗೆ ನೋಟಿಫಿಕೇಷನ್ಗೆ ಮುಂದಾದಲ್ಲಿ ತಕ್ಕ ಪಾಠ ಕಲಿಸಬೇಕಾಗುವುದು ಎಂದು ಎಚ್ಚರಿಸಿದರು.
ದರೋಡೆಯ ಸರ್ಕಾರ: ಹಾಲು ಉತ್ಪಾದಕರಿಗೆ ಪ್ರಸ್ತುತ ಸರ್ಕಾರ ನೀಡುತ್ತಿರುವ ಹಾಲಿನ ಬೆಲೆಯು ನ್ಯಾಯೋಚಿತಯ ಅಲ್ಲ. ಸ್ವಾಮಿನಾಥನ್ ವರದಿಯಂತೆ ದರ ನಿಗಧಿ ಮಾಡಿದಲ್ಲಿ ರೈತರು ಸ್ವಲ್ಪಮಟ್ಟಿಗೆ ಸುಧಾರಣೆ ಕಾಣಬಹುದು. ಪಶು ಆಹಾರ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ವೇಳೆ ಹಾಲಿನ ಬೆಲೆ ಕಡಿತ ಮಾಡಿದರೆ ಹೈನುಗಾರಿಕೆಗೆ ಕೊಡಲಿಪೆಟ್ಟು ಬೀಳಲಿದೆ. ಗ್ರಾಹಕರಿಗೆ ಹಾಲಿನ ಬೆಲೆ ಜಾಸ್ತಿ ಮಾಡಿದಲ್ಲಿ ರೈತರಿಗೆ ನೀಡುವ ಬದಲಿಗೆ ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ 2 ಕಡಿತ ಮಾಡಿ ದರೋಡೆಗೆ ಇಳಿದಿದೆ ಎಂದರು.
ವಚನ ತಪ್ಪಿದ ಮುಖ್ಯಮಂತ್ರಿ: ಅಧಿಕಾರಕ್ಕೂ ಬರುವ ಮುನ್ನ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೇರಿ ವರ್ಷ ಕಳೆದರೂ ಕೊಟ್ಟ ಭರವಸೆಯನ್ನು ಈಡೇರಿಸದೇ ವಚನ ಭ್ರಷ್ಟರಾಗಿದ್ದು, ಗ್ಯಾರೆಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ಹಾಗೂ ಜನವಿರೋಧಿ ಧೋರಣೆಗಳೊಂದಿಗೆ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ತಂದು ಇಟ್ಟಿದೆ ಎಂದು ಟೀಕಿಸಿದರು.
ಪದೇ ಪದೇ ಬರ ಎದುರಿಸುವ ಬಯಲುಸೀಮೆ ಭಾಗದ ಜಿಲ್ಲೆಗಳು ನೀರಾವರಿಯ ಸಮಸ್ಯೆಯನ್ನು ನೀಗಹಿಸಲು ಕೂಡಲೇ ಎತ್ತಿನೆಹೊಳೆ ಸೇರಿ ಇನ್ನಿತರೆ ಮೂಲಗಳಿಂದ ಶಾಶ್ವತ ನೀರಾವರಿಯನ್ನು ಕಲ್ಪಿಸಬೇಕು, ಜಂಗಮಕೋಟೆ ವ್ಯಾಪ್ತಿಯ ಕೃಷಿ ಭೂಮಿಯನ್ನು ಸ್ವಾಧೀನ ಪ್ರತಿಕ್ರಿಯೆಯನ್ನು ಕೂಡಲೇ ಕೈಬಿಡಬೇಕು, ಕೆ.ಸಿ ಹಾಗೂ ಎಚ್ಎನ್ ವ್ಯಾಲಿ ಯೋಜನೆ ಪೂರ್ಣ ಪ್ರಮಾಣದ ಜಾರಿ, ಹಾಲಿನ ದರ ಇಳಿಕೆಯ ಆದೇಶ ಹಿಂಪಡೆದು ಪ್ರೋತ್ಸಾಹಧನ ಏರಿಸುವುದು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಇದಕ್ಕೂ ಮುನ್ನ ಶಿಡ್ಲಘಟ್ಟದಿಂದ ಟ್ರಾಯಕ್ಟರ್ ರಯಾಲಿಯೊಂದಿಗೆ ಆಗಮಿಸಿ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಭವನದ ಗೇಟ್ ಬಳಿ ತಡೆದ ವೇಳೆ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಜಿಲ್ಲಾಡಳಿತ ಭವನದ ಎದುರು ರಾಸುಗಳೊಂದಿಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಕಾರ್ಯಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಉಪಾಧ್ಯಕ್ಷ ಹೊಸಕೋಟೆ ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿ ಕೋಲಾರ ವೀರಭದ್ರ ಸ್ವಾಮಿ, ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥ್, ವೇಣುಗೋಪಾಲ್, ಮುನಿನಂಜಪ್ಪ, ಮರಳುಕುಂಟೆ ರಾಮಾಂಜಿನಪ್ಪ, ತಾದೂರು ಮಂಜುನಾಥ್, ನಾರಾಯಣಸ್ವಾಮಿ, ರಮಣರೆಡ್ಡಿ, ಸೋಮ ಶೇಖರ್, ಗೋಪಾಲ್, ರಾಮಾಂಜಿನಪ್ಪ, ಅಶ್ವತ್ಥಪ್ಪ, ರಮೇಶ್, ಹೀರೆಬಲ್ಲ ಕೃಷ್ಣಪ್ಪ, ಹೆಣ್ಣಂಗೂರು ಮಂಜುನಾಥ್, ಇದ್ದರು.