ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ದಾಖಲಾಗಿದ್ದು, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಆಕ್ರೋಶಗೊಂಡ ದುಬಾರಿ ಆಡಿ ಕಾರು ಚಾಲಕ ಬೈಕ್ ಚಾಲಕನನ್ನು ಬರೊಬ್ಬರಿ 4 ಕಿಮೀ ವರೆಗೂ ಎಳೆದೊಯ್ದ ದಾರುಣ ಘಟನೆ ವರದಿಯಾಗಿದೆ.
ಪುಣೆಯ ಪಿಂಪ್ರಿ-ಚಿಂಚ್ವಾಡ್ ಟೌನ್ಶಿಪ್ನಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಆಡಿ ಕಾರು ಚಾಲಕ ಮತ್ತು ಬೈಕ್ ಸವಾರ ಇಬ್ಬರೂ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಈ ವೇಳೆ ಆಕ್ರೋಶಗೊಂಡ ಆಡಿ ಕಾರು ಚಾಲಕ ಮೋಟಾರ್ಸೈಕಲ್ ಸವಾರನನ್ನು ಕಾರಿನ ಬಾನೆಟ್ನಿಂದ ಗುದ್ದಿ ಆತನನ್ನು ಬರೊಬ್ಬರಿ 3 ಕಿಲೋಮೀಟರ್ಗೂ ಹೆಚ್ಚು ದೂರ ಎಳೆದೊಯ್ದಿದ್ದಾನೆ. ಈ ಕುರಿತ ಸಿಸಿಟಿವಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಘಟನೆ ಭಾನುವಾರ ನಡೆದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಕಾರು ಚಾಲಕ ಕಮಲೇಶ್ ಪಾಟೀಲ್ (23) ಮತ್ತು ಆತನ ಇಬ್ಬರು ಸಹಚರರಾದ ಹೇಮಂತ್ ಮ್ಹಾಲಾಸ್ಕರ್ (26) ಮತ್ತು ಪ್ರಥಮೇಶ್ ದಾರಾಡೆ (22) ಅವರನ್ನು ಬಂಧಿಸಿದ್ದಾರೆ. ಪೋಲೀಸರ ಪ್ರಕಾರ, ಸಂತ್ರಸ್ತ ಬೈಕ್ ಸವಾರ ಝಚೇರಿಯಾ ಮ್ಯಾಥ್ಯೂ ಅವರು ಮೋಟಾರು ಸೈಕಲ್ನಲ್ಲಿ ಹೋಗುತ್ತಿದ್ದಾಗ ಅವರ ದ್ವಿಚಕ್ರ ವಾಹನಕ್ಕೆ ಬಿಜ್ಲಿನಗರ ಪ್ರದೇಶದಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಆಡಿ ಕಾರು ಡಿಕ್ಕಿ ಹೊಡೆದಿದೆ.
ಈ ವೇಳೆ ಆಕ್ರೋಶಗೊಂಡು ಮ್ಯಾಥ್ಯೂ ಕೂಡಲೇ ಬೈಕ್ ನಿಲ್ಲಿಸಿ ಬಂದು ಆಡಿ ಕಾರು ಚಾಲಕ ಕಮಲೇಶ್ ಪಾಟೀಲ್ ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕಾರಿನೊಳಗಿದ್ದ ಆರೋಪಿ ಕಮಲೇಶ್ ಮತ್ತು ಆತನ ಮೂವರು ಸ್ನೇಹಿತರು ಮ್ಯಾಥ್ಯೂರನ್ನು ನಂದಿಸಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಸಂಘರ್ಷ ತಾರಕಕ್ಕೇರಿದ್ದು, ಕಾರು ಚಾಲಕ ಕೆಳಗೆ ಬೀಳುತ್ತಲೇ ಆಡಿಕಾರನ್ನು ನುಗ್ಗಿಸಿದ ಕಮಲೇಶ್ ಆತನ ಮೇಲೆ ಕಾರು ಹರಿಸಲು ಪ್ರಯತ್ನಿಸಿದಾಗ ಮ್ಯಾಥ್ಯೂ ಕಾರಿನ ಬಾನೆಟ್ ಮೇಲೆ ಹಾರುತ್ತಾನೆ. ಆದರೂ ಬಿಡದ ಕಮಲೇಶ್ ಆತನನ್ನು ಸುಮಾರು 3 ಕಿ.ಮೀ ದೂರದವರೆಗೂ ಎಳೆದೊಯ್ಯುತ್ತಾನೆ,. ಬಳಿಕ ಹೇಗೋ ಮ್ಯಾಥ್ಯೂ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದು, ಮ್ಯಾಥ್ಯೂ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ನಿಗ್ಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಚಾಲಕ ಸೇರಿದಂತೆ ಮೂವರು ಕಾರಿನಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.