ಆನೇಕಲ್: ಸತ್ಯಮೇವ ಜಯತೇ, ಅಹಿಂಸೆಯೇ ಪರಮ ಧರ್ಮ ಎಂಬ ನಂಬಿಕೆ ತತ್ವಗಳಿಂದ ಗಾಂಧೀಜಿ ರವರು ಅಮರರಾದರೆ, ಜೈ ಜವಾನ್ ಜೈ ಕಿಸಾನ್, ಖ್ಯಾತಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ದೇಶಕ್ಕಾಗಿ ಒಪ್ಪತ್ತು ಉಪವಾಸ ಮಾಡಿ ಎಂಬ ಕರೆ ನೀಡಿ ದೇಶವಾಸಿಗಳನ್ನು ಒಗ್ಗೂಡಿಸಿದ ಅಜೇಯ ಶಕ್ತಿ ಎಂದು ಗಾಂಧೀ ಜಯಂತಿ ಸಮಿತಿ ಮತ್ತು ಗಾಂಧೀ ಕುಟೀರ ಟ್ರಸ್ಟ್ ನ ಅಧ್ಯಕ್ಷ ಎ. ವಿ. ವಸಂತರಾಜು ತಿಳಿಸಿದರು.
ಅವರು ಸಮಿತಿ ವತಿಯಿಂದ ಏರ್ಪಡಿಸಿದ್ದ 55ನೆಯ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಇಬ್ಬರೂ ಮಹನೀಯರ ಆದರ್ಶ ಮತ್ತು ತತ್ವಗಳು ಇಂದಿಗೂ, ಎಂದಿಗೂ ಅನುಕರಣೀಯವಾಗಿದೆ. ಗಾಂಧೀಜಿ ತಮ್ಮ ಅನುಯಾಯಿಗಳ ಸಹಕಾರದೊಂದಿಗೆ ಭಾರತಾಂಬೆಗೆ ದಾಸ್ಯದಿಂದ ಮುಕ್ತಿ ಕೊಡಿಸಿದರೆ ಶಾಸ್ತ್ರೀಜಿ ರವರು ಸ್ವಾಭಿಮಾನ ಹಾಗೂ ಸ್ವಾವಲಂಬನೆಗೆ ನಾಂದಿ ಹಾಡಿದರು. ಇಬ್ಬರೂ ಮಹನೀಯರು ಸ್ವಾತಂತ್ರ ನಂತರ ದೇಶಕ್ಕಾಗಿ ಪ್ರಾಣ ತೆತ್ತರು ಎಂದು ಗದ್ಘದಿತರಾದರು.
ಗೌರವ ಅಧ್ಯಕ್ಷ ರುದ್ರಸ್ವಾಮಿ ಮಾತನಾಡಿ ಇಂದಿನ ರಾಜಕಾರಣಿಗಳು ಗಾಂಧೀಜಿ, ವಲ್ಲಭ ಭಾಯಿ ಪಟೇಲ್, ಶಾಸ್ತ್ರೀಜಿ, ದೀನದಯಾಳ್ ಜಿ ರವರುಗಳ ಹೆಸರುಗಳನ್ನು ಸ್ವಾರ್ಥಕ್ಕಾಗಿ ಧಾರಾಳವಾಗಿ ಬಳಸಿಕೊಳ್ಳುತ್ತಾರೆಯೇ ವಿನಃ ಆಚರಣೆ, ಅನುಸ್ಠಾನಕ್ಕಲ್ಲ ಎಂಬುದು ಜನಜನಿತವಾಗಿದೆ. ದಿನ ನಿತ್ಯ ಪತ್ರಿಕೆ, ವಾಹಿನಿಗಳನ್ನು ನೋಡುತ್ತಿದ್ದರೇ ನಿಂದನೆ, ಅವಾಚ್ಯ ಪದ ಬಳಕೆ, ಪರಸ್ಪರ ಕೆಸರೆರಚಾಟ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ. ಯುವ ಜನತೆ ರಾಷ್ಪ್ರ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿವೃದ್ಧಶೀಲ ದೇಶದ ಕನಸನ್ನು ಸಾಕಾರಮಾಡಬೇಕೆಂದು ಕೋರಿದರು.
ಶಾಂತಿನಿಕೇತನ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಇತ್ತೀಚೆಗೆ ಮೈಸೂರು ವಿವಿ ಇಂದ ಡಾಕ್ಟರೇಟ್ ಪಡೆದ ಡಾ. ಭಾರ್ಗವರವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.ಉಪಾಧ್ಯಕ್ಷ ರವಿ ಶಾಸ್ತ್ರಿ, ಕಾರ್ಯದರ್ಶಿ ಕೃಷ್ಣರಾಜು, ಸಮಿತಿಯ ಮಲ್ಲೇಶ್, ಸತ್ಯನಾರಾಯಣ ರಾಜು, ಗೋಪಾಲ ಕೃಷ್ಣ, ವೆಂಕಟರಾಜು, ನವೀನ್, ಗೋಪಿ, ಶುಭಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.