ಘಾಜಿಯಾಬಾದ್: ಸಂಭಾಲ್ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಗಾಜಿಪುರ ಗಡಿಭಾಗದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ತಡೆದ ಘಟನೆ ನಡೆದಿದೆ.
ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಇಂದು ಬೆಳಗ್ಗೆ ಘಾಜಿಪುರ ಗಡಿಯನ್ನು ತಲುಪಿದರು, ಅಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿತ್ತು ಸಂಭಾಲ್ಗೆ ಪ್ರವೇಶಿಸದಂತೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ.
ಸಂಭಾಲ್ನಲ್ಲಿ ಭಾನುವಾರದಂದು ಮುಕ್ತಾಯಗೊಳ್ಳಲಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 (ಅಪಾಯದ ತುರ್ತು ಪ್ರಕರಣಗಳಲ್ಲಿ ಆದೇಶವನ್ನು ನೀಡುವ ಅಧಿಕಾರ) ಅಡಿಯಲ್ಲಿ ನಿರ್ಬಂಧಗಳನ್ನು ಈಗ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.
ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಅವರು ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್ನ ಪೊಲೀಸ್ ಕಮಿಷನರ್ಗಳು ಮತ್ತು ಅಮ್ರೋಹಾ ಮತ್ತು ಬುಲಂದ್ಶಹರ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ರಾಹುಲ್ ಗಾಂಧಿಯನ್ನು ತಮ್ಮ ಜಿಲ್ಲೆಗಳ ಗಡಿ ಪ್ರವೇಶಿಸಲು ಬಿಡದಂತೆ ಒತ್ತಾಯಿಸಿದ್ದರು.
ರಾಹುಲ್ ಗಾಂಧಿಯವರನ್ನು ಸಂಭಾಲ್ ಗೆ ಹೋಗಲು ಬಿಡುವುದಿಲ್ಲ, ಆಡಳಿತವು ನಿಷೇಧಾಜ್ಞೆಗಳನ್ನು ಹೊರಡಿಸಿದೆ. ಪೊಲೀಸರು ರಾಹುಲ್ ಗಾಂಧಿಯನ್ನು ಗೇಟ್ ಬಳಿ ನಿಲ್ಲಿಸಿದ್ದಾರೆ ಎಂದು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸ್ಥಳದಲ್ಲಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನವೆಂಬರ್ 19 ರಿಂದ ಸಂಭಾಲ್ನಲ್ಲಿ ಉದ್ವಿಗ್ನತೆ ಉಂಟಾಗಿತ್ತು, ಮೊಘಲರ ಕಾಲದ ಮಸೀದಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಈ ಹಿಂದೆ ಹರಿಹರ ದೇವಾಲಯವೊಂದು ಆ ಸ್ಥಳದಲ್ಲಿತ್ತು ಎಂಬ ಹೇಳಿಕೆಯ ಮೇರೆಗೆ ಸಮೀಕ್ಷೆ ನಡೆಸಲಾಯಿತು.
ನವೆಂಬರ್ 24 ರಂದು ನಡೆದ ಎರಡನೇ ಸಮೀಕ್ಷೆಯ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಶಾಹಿ ಜಾಮಾ ಮಸೀದಿ ಬಳಿ ಜಮಾಯಿಸಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.