ಬೆಂಗಳೂರು: ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಂತಹ ಗುಣವನ್ನು ಕೆ.ಎಚ್.ಪಾಟೀಲ ಅವರು ಹೊಂದಿದ್ದು ಬೆಂಗಳೂರಿನ `ಕೆ.ಎಚ್.ಪಾಟೀಲ್ ಸ್ಕೂಲ್ ಆಫ್ ಲಾ’ ಉದ್ಘಾಟಿಸಲು ನನಗೆ ನಿಜಕ್ಕೂ ಸಂತೋಷ ಎನಿಸುತ್ತಿದೆ. ಈ ಕಾಲೇಜಿನಲ್ಲಿ ಇಡೀ ರಾಷ್ಟ್ರವೇ ಮೆಚ್ಚುವಂತಹ ಗುಣಮಟ್ಟದ ಕಾನೂನು ಶಿಕ್ಷಣ ದೊರೆಯುವಂತಾಗಲಿ ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಸಂಜೆ ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲ ಅಭಿಮಾನಿ ಬಳಗ, ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳು ಹಾಗೂ ಸಹಕಾರ ರಂಗದ ಭೀಷ್ಮ ಕೆ.ಎಚ್.ಪಾಟೀಲ ಮೆಮೋರಿಯಲ್ ಟ್ರಸ್ಟ್ಬೆಂಗಳೂರು ಇವರು ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಆಚರಣೆ ಮತ್ತು ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ಬೆಂಗಳೂರು ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗ ಮತ್ತು ಸಂಪಾದನೆ ಯಾರು ಬೇಕಾದರೂ ಸಂಪಾದಿಸಬಹುದು. ವಿದ್ಯಾರ್ಥಿಗಳು ಇದಕ್ಕಿಂತ ಮುಖ್ಯವಾಗಿ ಅತ್ಯುನ್ನತ ಧ್ಯೇಯಗಳೊಂದಿಗೆ ಗುಣಮಟ್ಟದ ಶಿಕ್ಷಣ ಹೊಂದಬೇಕೆಂದರು.
ಮಾಜಿ ಮುಖ್ಯಮಂತ್ರಿಗಳು, ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಲಾ ಶಾಲೆಯ ಲಾಂಛನ ಉದ್ಘಾಟಿಸಿ ಮಾತನಾಡಿ, ಸದನದಲ್ಲಿ ಸಹೋದ್ಯೋಗಿಗಳ ಟೇಬಲ್ ಮೇಲಿನ ಸಿಹಿ ಕಬಳಿಸಿ ತಿನ್ನುವ ಕ.ಎಚ್.ಪಾಟೀಲ್ ಅವರಗುಣವನ್ನು ಹಾಸ್ಯದೊಂದಿಗೆ ಸ್ಮರಿಸುತ್ತಾ, ಕೆ.ಎಚ್. ಪಾಟೀಲ ಸ್ನೇಹಶೀಲರು. ಶ್ರೇಷ್ಠ ಇಚ್ಛಾಶಕ್ತಿ ಹೊಂದಿದ್ದ
ಧೀಮಂತ ನಾಯಕರಾಗಿದ್ದರು. ಪಂಚಾಯ್ತಿ ಅಧ್ಯಕ್ಷರಾಗಿ ಸಾಕಷ್ಟು ಸಾಧನೆ ಮಾಡಿದ್ದ ಅವರು, ಇಡೀ ಗದುಗಿನ ವಾತಾವರಣವನ್ನೇ ಬದಲಾಯಿಸಿದ್ದರು. ದಾರ್ಶನಿಕ, ನಿಷ್ಠುರವಾದಿಯಾಗಿದ್ದರು. ಇಂಥ ರಾಜಕಾರಣಿಗಳು ಸಿಗುವುದು ಅಪರೂಪ. ಅವರೊಬ್ಬ ಆಕಾಶದಂತಿದ್ದರು.
ಪರ್ವತಕ್ಕೆ ಪರ್ವತವೇ ಸಾಟಿ ಎನ್ನುವ ವ್ಯಕ್ತಿತ್ವವುಳ್ಳ ಅವರು ನಿಷ್ಠುರವಾದಿಗಳಾಗದಿದ್ದರೆ ಮುಖ್ಯಮಂತ್ರಿ ಗಳಾಗಬಹುದಿತ್ತು ಎಂದರು.ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, 1969ರಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ನನಗೆ ಕೆ.ಎಚ್.ಪಾಟೀಲರು ದೊಡ್ಡ ನಾಯಕರಾಗಿ ಗೊತ್ತು. ವೀರೇಂದ್ರ ಪಾಟೀಲರು ಮತ್ತು ಎಸ್.ಬಂಗಾರಪ್ಪ ಅವರ ಅವಧಿಯಲ್ಲಿ ಸಚಿವರಾಗಿದ್ದವರು. ಇಂದಿರಾಗಾಂಧಿ ಅವರು ಹಾಕಿಕೊಟ್ಟ ಕಾರ್ಯಕ್ರಮಗಳಿಂದ ನನ್ನಂಥವನು ಮಂತ್ರಿಯಾಗಿ ಬೆಳೆಯಲು ಸಾಧ್ಯವಾಗಿದೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ಹಾದಿಯಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೋವಿಡ್ ವೇಳೆ ಜನರು ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದರು. ಈಗ ಚೇತರಿಸಿಕೊಳ್ಳುವಂತಾಗಿದೆ ಎಂದರು.
ಮಾಜಿ ಸಚಿವ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಎಪಿಎಂಸಿ ಅಧ್ಯಕ್ಷನಾಗುವ ನನ್ನ ಕನಸಿಗೆ ವಿರುದ್ಧವಾಗಿ ನನ್ನ ಜಿಲ್ಲೆಯ ಐವರು ಶಾಸಕರು ಕೆ.ಎಚ್.ಪಾಟೀಲರ ಬಳಿ ದೂರು ನೀಡಿದ್ದರು. ಆಗ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದ ಕೆ.ಎಚ್.ಪಾಟೀಲರು ನನ್ನನ್ನು ಹುರಿದುಂಬಿಸಿದ್ದರು. ಅಧ್ಯಕ್ಷನಾಗಿ ರಾಜಕೀಯವಾಗಿ ಬೆಳೆಯಲು ಕಾರಣರಾಗಿದ್ದರು. ಜವಾರಿ ಭಾಷೆಯಲ್ಲಿ ಮಾತನಾಡುವ ಅವರ ಕಣ್ಣಲ್ಲಿ ಪ್ರೀತಿ ಇತ್ತು. ಒಳ್ಳೆ ಗುರುಗಳು ಇದ್ದರೆ ಏನು ಬೇಕಾದರೂ ಆಗಬಹುದು. ಅವರಿಂದಾಗಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು.
ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಎಸ್.ಹೊರಟ್ಟಿ ಮಾತನಾಡಿ, ಕೆ.ಎಚ್.ಪಾಟೀಲರ ಮಾರ್ಗದರ್ಶನದಲ್ಲಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಾರಣಾಂತರಗಳಿಂದ ರಾಜಕೀಯಕ್ಕೆ ಬಂದ ನನಗೆ ಪಾಟೀಲರು ತಂದೆ ಸಮಾನರಾಗಿದ್ದರು. ಒಬ್ಬ ಸರಪಂಚ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದದ್ದು ದಾಖಲೆ. ಅವರಿಂದಾಗಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಇಂದಿರಾಗಾಂಧಿಯಂಥವರು ಹುಲಕೋಟಿಗೆ ಬರಬೇಕಾಯಿತು. ಅವರಿಗೆ ಜಾತಿ ಇರಲಿಲ್ಲ. ಎಂದಿಗೂ ಮುಖವಾಡ ಧರಿಸಲಿಲ್ಲ. ಆರ್.ಗುಂಡೂರಾಯರಿಗೆ ವೇದಿಕೆಯಲ್ಲೇ ಇಂಜಿನಿಯರಿಂಗ್ ಕಾಲೇಜು ಒದಗಿಸಿಕೊಡಿ ಎಂದು ಕೇಳಿ ಪಡೆದ ಧೀಮಂತ. ಸ್ವಂತ ಹೋರಾಟ, ಛಲದ ಮೇಲೆ ಅವರು ನಿಂತಿದ್ದರು. ನಾಡು ಕಂಡ ಶ್ರೇಷ್ಠ ರಾಜಕಾರಣಿಯಾದ ಅವರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಶರಣಗೌಡ ಪಾಟೀಲ, 5ನೇ ಹಣಕಾಸು ಆಯೋಗದ ಅಧ್ಕಕ್ಷ ಡಾ.ಸಿ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ತಿಮ್ಮಾಪುರ, ರುದ್ರಪ್ಪ ಲಮಾಣಿ, ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಿಂದ ಆಗಮಿಸಿದ ಹಲವಾರು ಶಾಸಕರು, ಸಹಕಾರಿ ಸಂಘಗಳ ಧುರೀಣರು, ಪಾಟೀಲರ ಅಭಿಮಾನಿಗಳು ಮತ್ತಿತರರು ಇದ್ದರು.ಇದಕ್ಕೂ ಮುನ್ನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ತಂಡದವರಿಂದ ಕೆ.ಎಚ್.ಪಾಟೀಲ ಲಾವಣಿ ಪ್ರಸ್ತುತ ಪಡಿಸಿದರೆ, ರೇವತಿ ಕುಮಾರ್ ಪತ್ತಾರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶಂಕರ್ ಪ್ರಕಾಶ್ ನಿರೂಪಿಸಿದರು.