ಕರಾಚಿ : 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಭಾಗವಹಿಸುವಿಕೆಯ ಕುರಿತ ವದಂತಿ ಹೆಚ್ಚಾಗುತ್ತಿರುವಾಗಲೇ ಟೂರ್ನಿಯಲ್ಲಿ ಭಾರತ ತಂಡ ಆಡಲಿರುವ ಪಂದ್ಯಗಳು ಪಾಕಿಸ್ತಾನದಿಂದ ಯುಎಇಗೆ ಸ್ಥಳಾಂತರವಾಗಲಿದೆ ಎಂಬ ವರದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ)ಸಂಪೂರ್ಣ ತಿರಸ್ಕರಿಸಿದೆ.
ಒಂದು ವೇಳೆ ಭಾರತವು ಫೈನಲ್ಗೆ ಪ್ರವೇಶಿಸಿದರೆ ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯ ಕಾರಣ ಪಂದ್ಯವನ್ನು ದುಬೈನಲ್ಲಿ ಮರು ನಿಗದಿಪಡಿಸುವ ಸಾಧ್ಯತೆಯಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ ವರದಿ ಮಾಡಿತ್ತು.ಫೈನಲ್ ಮಾತ್ರವಲ್ಲ ಸೆಮಿ ಫೈನಲ್ ಪಂದ್ಯಗಳು ಪಾಕಿಸ್ತಾನದಿಂದ ಹೊರಗೆ ನಡೆಯಲಿದೆ ಎಂದು ವರದಿ ತಿಳಿಸಿತ್ತು.
ಭಾರತ ಕ್ರಿಕೆಟ್ ತಂಡವು ಜುಲೈ 2018ರಿಂದ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ. ಉಭಯ ದೇಶಗಳ ಹದಗೆಟ್ಟಿರುವ ರಾಜಕೀಯ ಸಂಬಂಧಗಳು ಪಾಕಿಸ್ತಾನ ನೆಲದಲ್ಲಿ ದ್ವಿಪಕ್ಷೀಯ ಸರಣಿ ಹಾಗೂ ಟೂರ್ನಮೆಂಟ್ಗಳ ಮೇಲೂ ಪರಿಣಾಮ ಬೀರಿದೆ.ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಭಾಗವಹಿಸುವಿಕೆಯ ಕುರಿತು ಕಳವಳ ಹೆಚ್ಚಾಗಿದ್ದು, ಐಸಿಸಿ ಕೂಡ ಗೊಂದಲದಲ್ಲಿದೆ.
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಪ್ರಸಕ್ತ ರಾಜಕೀಯ ಉದ್ವಿಗ್ನತೆ ನಡುವೆಯೂ ಯಶಸ್ವಿ ಹಾಗೂ ಅಡೆತಡೆ ಇಲ್ಲದ ಪಂದ್ಯಾವಳಿಯನ್ನು ಆಯೋಜಿಸಲು ತಾನು ಬದ್ಧವಾಗಿದ್ದೇನೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಾಕಿಸ್ತಾನದಿಂದ ಹೊರಗೆ ಸ್ಥಳಾಂತರವಾಗಲಿದೆ ಎಂಬ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಪಿಸಿಬಿ ತಿಳಿಸಿದೆ. ಇದೇ ವೇಳೆ, ಫೈನಲ್ ಪಂದ್ಯದ ಸ್ಥಳ ಬದಲಾವಣೆಯ ಕುರಿತಾಗಿ ಐಸಿಸಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 2023ರ ಏಶ್ಯಕಪ್ನಂತೆಯೇ ಪಂದ್ಯಾವಳಿಯಲ್ಲಿ ಹೈಬ್ರಿಡ್ ಮಾದರಿ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಏಶ್ಯಕಪ್ನಲ್ಲಿ ಭಾರತವು ಫೈನಲ್ ಸಹಿತ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು.