ಹಾರ್ದಿಕ್ ಪಾಂಡ್ಯ ನೇತೃತ್ವದ ಬರೋಡಾ ತಂಡ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಪಂದ್ಯವನ್ನು ಸೋತು ಟೂರ್ನಿಯಿಂದ ಹೊರಬಿತ್ತು. ಆದರೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಹಿಂದೆ ಕಂಡ ಬ್ಯಾಡ್ ಬಾಯ್ ಇವರೇನಾ ಎಂಬಷ್ಟರ ಮಟ್ಟಿಗೆ ಅವರ ವರ್ತನೆಯಲ್ಲಿ ಬದಲಾವಣೆ ಕಂಡಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ತಂದು ಕೊಟ್ಟಿದೆ.
ಕೇವಲ ವರ್ಷದ ಹಿಂದೆ ಹಾರ್ದಿಕ್ ಪಾಂಡ್ಯ ಎಂದರೆ ಕ್ರಿಕೆಟ್ ಪ್ರೇಮಿಗಳು ಮೂಗು ಮುರಿಯುತ್ತಿದ್ದರು. ಅದಕ್ಕೆ ಕಾರಣ ಈ ಪ್ರತಿಭಾವಂತ ಕ್ರಿಕೆಟಿಗನ ಬ್ಯಾಡ್ ಬಾಯ್ ಇಮೇಜ್. ಕಾಫಿ ವಿಥ್ ಕರಣ್ ಶೋನಲ್ಲಿ ಕೆಎಲ್ ರಾಹುಲ್ ಜೊತೆಗೆ ಈತ ಕೂತಾಗ ಈತನ ಬಗ್ಗೆ ಇದ್ದ ಒಳ್ಳೆಯ ಅಭಿಪ್ರಾಯ ಬಿದ್ದು ಹೋಗಿತ್ತು. ಆದರೂ ಮ್ಯಾಚ್ ವಿನ್ನಿಂಗ್ ಆಲ್ ರೌಂಡರ್ ಎಂಬ ಕಾರಣಕ್ಕೆ ಕ್ರಿಕೆಟ್ ಪ್ರೇಮಿಗಳು ಆತನನ್ನು ಇಷ್ಟಪಟ್ಟಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದದ್ದೇನು?: ಇದು ಐದಾರು ತಿಂಗಳು ಹಿಂದಿನ ಮಾತಾಯಿತು. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆತ ನಡೆದುಕೊಂಡ ರೀತಿ ಜನರಿಗೆ ಅವರ ಮೇಲಿರುವ ಅಭಿಮಾನ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಶುಕ್ರವಾರ ಬರೋಡಾ ಮತ್ತು ಮುಂಬೈ ನಡುವೆ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ತಂಡ 158 ರನ್ ಮಾಡಿತ್ತು.
ಈ ಸೆಮಿಫೈನಲ್ ಪಂದ್ಯದಲ್ಲಿ ಬರೋಡಾ ನೀಡಿದ 158 ರನ್ ಗಳನ್ನು ಮುಂಬೈ ತಂಡ ಸುಲಭದಲ್ಲಿ ಬೆನ್ನತ್ತಿ ಜಯಶಾಲಿಯಾಯಿತು. ಆರಂಭಿಕ ಬ್ಯಾಟರ್ ಅಜಿಂಕ್ಯ ರಹಾನೆ ಅವರು ವೇಗದ 98 ರನ್ ಗಳಿಸಿ ಬರೋಡಾ ಜಯದ ಆಸೆಗೆ ತಣ್ಣೀರು ಎರಚಿದರು.