ನವದೆಹಲಿ: ಸಭಾಪತಿ ಜಗದೀಪ್ ಧನ್ಕರ್ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯದ ಕುರಿತು ವಿರೋಧ ಪಕ್ಷಗಳು ತೀವ್ರ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ನಾಳೆ ಮುಂದೂಡಲಾಗಿದೆ.
ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಸಭಾಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಯುಂಟು ಮಾಡಿದರು. ಅವಿಶ್ವಾಸ ನಿರ್ಣಯ ಕುರಿತು ಚರ್ಚೆಗೆ ಒತ್ತಾಯಿಸಿದರು.
ಇದಕ್ಕೆ ಸಭಾಪತಿಗಳು ಒಪ್ಪದೆ, ಪಟ್ಟಿ ಮಾಡಲಾದ ವಿಷಯಗಳ ಕುರಿತು ಚರ್ಚೆಗೆ ಅನುಮತಿ ನೀಡಿದರು. ಇದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗದ್ದಲವನ್ನುಂಟು ಮಾಡಿತು. ಬಳಿಕ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗರೂ ವಿಪಕ್ಷಗಳು ಗದ್ದಲವನ್ನು ಮುಂದುವರೆಸಿದವು. ಹೀಗಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರತಿಪಕ್ಷಗಳ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಪಕ್ಷಪಾತ ಹಾಗೂ ಪ್ರತಿಪಕ್ಷ ನಾಯಕರು ಮಾತನಾಡಲು ನೀಡುವ ಸಮಯದ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯಸಭೆ ಸಭಾಪತಿ ಜಗದೀಪ್ ಧನ್ಕರ್ ವಿರುದ್ಧ ಮಂಗಳವಾರ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.