ಹೊಸದಿಲ್ಲಿ: ಸರಿಯಾಗಿ ಒಂದು ದಶಕದ ಬಳಿಕ ಅಂತಾರಾಷ್ಟ್ರೀಯ ಹಾಕಿ ಹೊಸದಿಲ್ಲಿಗೆ ಮರಳಿದೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ, ವಿಶ್ವ ಚಾಂಪಿಯನ್ ಜರ್ಮನಿಯನ್ನು 2 ಪಂದ್ಯಗಳ ಸರಣಿಯಲ್ಲಿ ಎದುರಿಸಲಿದೆ. ಪಂದ್ಯಗಳು ಬುಧವಾರ ಮತ್ತು ಗುರುವಾರ ನಡೆಯಲಿವೆ.
ಕಳೆದ 10 ವರ್ಷಗಳಿಂದ ರಾಜಧಾನಿಯ ಮೇಜರ್ ಧ್ಯಾನ್ಚಂದ್ ನ್ಯಾಶನಲ್ ಸ್ಟೇಡಿಯಂನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆದಿರಲಿಲ್ಲ. ಇಲ್ಲಿ ಕೊನೆಯ ಪಂದ್ಯ ನಡೆದದ್ದು 2014ರಲ್ಲಿ. ಅದು ಹೀರೋ ವರ್ಲ್ಡ್ ಲೀಗ್ ಫೈನಲ್ ಆಗಿತ್ತು. ಭಾರತ-ಜರ್ಮನಿ ಪಂದ್ಯಗಳಿಗೆ ಉಚಿತ ಪ್ರವೇಶ ನೀಡಲಾಗಿದ್ದು, ಈಗಾಗಲೇ 12 ಸಾವಿರದಷ್ಟು ಮಂದಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್ನಲ್ಲಿ ಜರ್ಮನಿ 3-2 ಅಂತರದಿಂದ ಭಾರತವನ್ನು ಮಣಿಸಿತ್ತು. ಇದರಿಂದ ಭಾರತದ ಫೈನಲ್ ಓಟಕ್ಕೆ ತಡೆ ಬಿದ್ದಿತ್ತು.
ಅನಂತರ ಚೀನವನ್ನು ಮಣಿಸಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಭಾರತದ್ದಾಗಿದೆ. ಯುವ ಮತ್ತು ಅನುಭವಿ ಆಟಗಾರರನ್ನು ಒಳಗೊಂಡಿರುವ ಹರ್ಮನ್ಪ್ರೀತ ಸಿಂಗ್ ಸಾರಥ್ಯದ ಭಾರತ ತಂಡ ಜರ್ಮನಿ ವಿರುದ್ಧ ತವರಲ್ಲಿ ಜಬರ್ದಸ್ತ್ ಪ್ರದರ್ಶನ ನೀಡೀತು ಎಂಬ ನಿರೀಕ್ಷೆ ಬಲವಾಗಿದೆ. ಇತ್ತಂಡಗಳ ನಡುವಿನ ಕಳೆದ 5 ಪಂದ್ಯಗಳಲ್ಲಿ ಭಾರತ 3 ಜಯ ಸಾಧಿಸಿದೆ.