ಹೊಸಕೋಟೆ: ಟೌನ್ ವಿವಿದೋಧ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ 2023-24 ಸಾಲಿನಲ್ಲಿ ರೂ. 1.52 ಕೋಟಿಗಳ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ ಕೃಷ್ಣಮೂರ್ತಿ ತಿಳಿಸಿದ್ದಾರೆ.
ನಗರದ ಶ್ರೀವಾರಿ ಕಲ್ಯಾಣಮಂಟಪದಲ್ಲಿ ನಡೆದ 49ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಗ್ರಾಮಾಂತರ ಜಿಲ್ಲೆಯಲ್ಲಿ ಸಂಘವು ಕಾರ್ಯಾಚರಣೆ, ಲಾಭ ಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಸಾಲ ವಸೂಲಾತಿಯಲ್ಲೂ ಸಹ ಶೇ.99.20ರಷ್ಟು ಪ್ರಗತಿ ಸಾಧಿಸಿದೆ. ಸಂಘವು ತನ್ನ ಉಪನಿಯಮದಂತೆ ಗ್ರಾಹಕರಿಂದ ಠೇವಣಿ ಸಂಗ್ರಹಣೆ, ರೈತರಿಗೆ ಕೃಷಿ ಉದ್ದೇಶಕ್ಕಾಗಿ ಸರಕಾರದ ನಿಯಮಗಳಿಗೆ ಅನುಗುಣವಾಗಿ ಶೂನ್ಯ ಬಡ್ಡಿ ಸಾಲ, ಕೃಷಿಯೇತರ ಚಟುವಟಿಕೆಗಳಿಗೂ, ಚಿನ್ನಾಭರಣ ಅಡಮಾನದಂತಹ ಇತರೆ ಸಾಲ ಸೌಲಭ್ಯ ನೀಡುತ್ತಿದೆ.
ಇದರೊಂದಿಗೆ ಶಾಖೆಗಳ ಮೂಲಕ ರಸಗೊಬ್ಬರಗಳ ಮಾರಾಟ ಸಹ ಮಾಡಲಾಗುತ್ತಿದೆ. ಆಪದ್ದನ ರೂ. 2.77 ಕೋಟಿ, ಸದಸ್ಯರಿಂದ ಠೇವಣಿ ರೂ. 126.2 ಕೋಟಿಗಳಷ್ಟಿದ್ದು, ಒಟ್ಟು ದುಡಿಯುವ ಬಂಡವಾಳ ರೂ. 141.1 ಕೋಟಿಗಳಿದೆ ಎಂದು ತಿಳಿಸಿದ ಅವರು ಹೂಡಿಕೆಗಳು ರೂ. 38.9 ಕೋಟಿ. ರೈತರಿಗೆ ಬಡ್ಡಿ ರಹಿತ ಬೆಳೆಸಾಲ ರೂ. 8.66 ಕೋಟಿಗಳಾಗಿದ್ದು ಆಧಾರ ಸಾಲಗಳು ರೂ. 285.5 ಕೋಟಿಗಳಿದೆ ಎಂದರು.
ರಸಗೊಬ್ಬರ, ಪಶು ಆಹಾರ ಇತ್ಯಾದಿಗಳು ಮಾರಾಟ ಮಾಡುವುದರೊಂದಿಗೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೂ ಸಹ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸದಸ್ಯರ ಹಿತಕಾಪಾಡಲು ಸಂಘವು ಬದ್ದವಾಗಿದ್ದು ಉತ್ತಮ ಕಾರ್ಯನಿರ್ವಹಣಾ ಮಂಡಳಿ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಸಂಘವು ಮಾದರಿಯಾಗಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಕಿಯೋನಿಕ್ಸ್ ಅದ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಈ ಮೊದಲಿದ್ದ ರೇಷ್ಮೆ ಮತ್ತು ಕೃಷಿ ರೈತರ ಸಂಘ ಬದಲಾಗಿ ವಿವಿಧ್ದೋದೆಶ ಪ್ರಾಥಮಿಕ ಸಹಕಾರ ಸಂಘ ಎಂದು ಬದಲಿಸಲಾಗಿದ್ದು ಇದಕ್ಕೆ ಕಾರಣ ಈ ಭಾಗದಲ್ಲಿ ದಿನೇ ದಿನೆ ಕೃಷಿ ಚಟುವಟಿಗೆ ಕಡಿಮೆಯಾಗುತಿದ್ದು ನಗರೀಕರಣ ಹೆಚ್ಚಾಗುತ್ತಿರುವುದು ಎಂದ ಅವರು ಸಂಘವು ಉತ್ತಮ ಕಾರ್ಯ ಮಾಡುತಿದ್ದು ತಾಲೂಕಿನ ಕೆಲವು ಸಹಕಾರ ಸಂಘಗಳು ಲಾಭಾಂಶ ನೀಡಲು ಹರಸಾಹಸ ಮಾಡುತ್ತಿರುವುದರ ನಡುವೆ ಕಳೆದ ಮೂರು ವರ್ಷಗಳಿಂದ ನಿಯಮಾನುಸಾರ ಗರಿಷ್ಠ ಡಿವಿಡೆಂಟ್ ನೀಡುತ್ತಾ ಬಂದಿರುವುದು ಪ್ರಶಂಸನೀಯ.
ಈ ಸಹಕಾರ ಸಂಘ ಪ್ರಾರಂಭಗೊಂಡು 49 ವರ್ಷಗಳಾಗಿದ್ದು ಪರಿಸ್ಥಿತಿಗೆ ಹಾಗೂ ಬದಲಾಗುತ್ತಿರುವ ಸನ್ನಿವೇಶ, ಅಗತ್ಯತೆಗಳಿಗೆ ಅನುಗಣವಾಗಿ ರೈತರ ಬಾಳಿಗೆ ಹೊಸ ಚೈತನ್ಯ ನೀಡಿ ಇಂದು ಈ ಮಟ್ಟಿಗೆ ಯಶಸ್ವಿಯಾಗಿ ಬೆಳೆಯಲು ಸಾದ್ಯವಾಗಿದೆ ಎಂದರು.ಲೋಕಸಭಾ ಮಾಜಿ ಸದಸ್ಯ ಬಿ.ಎನ್.ಬಚ್ಚೇಗೌಡ ಮಾತನಾಡಿ ತಾಲೂಕಿನಲ್ಲಿ ಒಟ್ಟು 9 ಸಹಕಾರ ಸಂಘಗಳಿದ್ದು ಟೌನ್ ವಿವಿದೋಧ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಆಡಳಿತ ಮಂಡಳಿ, ಸಿಬ್ಬಂದಿಯ ನಿಸ್ವಾರ್ಥ ಸೇವಾ ಮನೋಭಾವ, ಪರಿಶ್ರಮದ ಪರಿಣಾಮವಾಗಿ ಉನ್ನತ ಸ್ಥಾನ ಪಡೆದುಕೊಂಡಿರುವುದು ಅಭಿನಂದನಾರ್ಹ.
ರೈತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಸಂಘವು ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಸುಮಾರು 1.16 ಸಾವಿರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತಿದೆ, ಜಿಲ್ಲೆಯಲ್ಲಿ ಹೆಚ್ಚು ಸಾಲ ನೀಡುವ ಸಹಕಾರ ಸಂಘ ಇದಾಗಿದ್ದು ವಸೂಲಾತಿಯಲ್ಲೂ ಹ ಪ್ರಥಮ ಸ್ಥಾನ ಗಳಿಸಿಕೊಂಡಿದೆ ಎಂದರು.
ಸಹಕಾರ ಸಂಘಗಳ ಜಂಟಿ ನಿರ್ದೇಶಕ ಅಶ್ವತ್ ನಾರಾಯಣ ಗೌಡ ಮಾತನಾಡಿ ರೈತ ಸಹಕಾರ ಸಂಘಗಳಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರ ಪಾರದರ್ಶಕವಾಗಿರಬೇಕು, ರೈತರಿಗೆ ಪ್ರತಿಯೊಂದು ಮಾಹಿತಿ ದೊರೆಯಬೇಕು ಆಗಲೇ ಸಹಕಾರ ಸಂಘ ಅಭಿವೃದ್ದಿ ಹೊಂದಲು ಸಾದ್ಯ, ಇದನ್ನು ಪಾಲಿಸುವ ಮೂಲಕ ಈ ಸಂಘವು ಇತರೆ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಎಸ್. ನಾರಾಯಣಶರ್ಮ ಸಭೆಯಲ್ಲಿ ಬ್ಯಾಂಕಿನ ವಾರ್ಷಿಕ ಲೆಕ್ಕ ಪತ್ರ, ಆಡಳಿತ ವರದಿ, ಹಣಕಾಸು ವಾಹಿತಿ ಸೇರಿದಂತೆ ವಿವರಗಳನ್ನು ಮಂಡಿಸಿದರು.ಸಭೆಯಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ಸತೀಶ್, ಸಿ.ವಿ. ಗಣೇಶ್, ಆರ್.ಸುಜಾತ, ರಾಜಪ್ಪ, ಎನ್.ವಿ. ವೆಂಕಟೇಶ್, ಅಶ್ವಥ್. ಡಿ.ಹೆಚ್.ಹರೀಶ್, ಬಿ. ಮುನಿರಾಜು, ನಾಗರತ್ನ, ಸುಬ್ರಮಣಿ, ರತ್ನಮ್ಮ, ವ್ಯವಸ್ಥಾಪಕ ಎಚ್.ಎ.ನಂಜುಂಡೇಗೌಡ, ಮುಖಂಡರಾದ ಗೋಪಾಲಗೌಡ, ಟಿಎಪಿಸಿಎಂಎಸ ಅದ್ಯಕ್ಷ ಬಾಬುರೆಡ್ಡಿ, ಬಮೂಲ್ ನಿರ್ದೇಶಕ ಎನ್.ಮಂಜುನಾಥ್, ಇನ್ನಿತರರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 85 ಕ್ಕೂ ಹೆಚ್ಚು ಅಂಕ ಪಡೆದ ಸದಸ್ಯರ 50 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.