ಚಾಮರಾಜನಗರ: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ಶಿಪ್ ಸೌಲಭ್ಯ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮಾನದಂಡಗಳಿದ್ದು, ಈ ಸಂಬಂಧ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ.
ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 48 ಸಾವಿರ ರೂ. ಸ್ಕಾಲರ್ಶಿಪ್ ಸೌಲಭ್ಯವಿದ್ದು, ಜನ ಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವ್ಯಾಟ್ಸಪ್ನಲ್ಲಿ ಹರಿದಾಡುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ದಕ್ಷಿಣ ಕನ್ನಡ ಎಂದು ಮೊಹರು ಹಾಕಿರುವ ಒಂದು ಅರ್ಜಿಯ ಫೋಟೋ ಹೊಂದಿರುವ ಈ ವ್ಯಾಟ್ಸಪ್ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂದೇಶವನ್ನು ನೋಡಿದ ಜನರು ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನಾ ಕಚೇರಿ ಹೀಗೆ ಹಲವು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದು ಜನರನ್ನು ಗೊಂದಲಕ್ಕೀಡು ಮಾಡಿದೆ.
ಆದರೆ ಪ್ರಾಯೋಜಕತ್ವ ಕಾರ್ಯಕ್ರಮವು ಮಕ್ಕಳನ್ನು ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸುವಂತೆ ಪ್ರೋತ್ಸಾಹಿಸುವ ಹಾಗೂ ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ನಿರ್ಗತಿಕರಾಗುವುದು, ಸಂಕಷ್ಟಕ್ಕೀಡಾಗುವುದು, ಓಡಿಹೋಗುವುದು, ಬಲವಂತದ ಬಾಲ್ಯವಿವಾಹ, ಬಾಲಕಾರ್ಮಿಕತೆ ಹಾಗೂ ಇತರೆ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಮಕ್ಕಳು ಕೌಟುಂಬಿಕ ವ್ಯವಸ್ಥೆಯಲ್ಲಿಯೇ ಬೆಳೆಯಲು ನೆರವಾಗುವಂತೆ ತಾತ್ಕಾಲಿಕ ಅವಧಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯಾಗಿದೆ.
ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ, 2015ರ ಕಲಂ 2(58)ರ ಪ್ರಕಾರ, ಪ್ರಾಯೋಜಕತ್ವವನ್ನು ಕುಟುಂಬಗಳಿಗೆ, ಮಗುವಿನ ವೈದ್ಯಕೀಯ, ಶೈಕ್ಷಣಿಕ ಹಾಗೂ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ಪೂರಕ ಬೆಂಬಲ, ಹಣಕಾಸು ಅಥವಾ ಇತರೆ ಸಹಕಾರ ಎಂದು ವ್ಯಾಖ್ಯಾನಿಸಲಾಗಿದೆ. ಪ್ರಾಯೋಜಕತ್ವ ಕಾರ್ಯಕ್ರಮ ಮಗುವಿನ ಸಮರ್ಪಕ ಆರೈಕೆಗಾಗಿ ಪೋಷಣೆ ಹಾಗೂ ರಕ್ಷಣೆಯ ಅಗತ್ಯವಿರುವಂತೆ ಕುಟುಂಬಗಳು ಅಥವಾ ವಿಸ್ತøತ ಕುಟುಂಬಗಳಿಗೆ ಪೂರಕವಾಗಿರುತ್ತದೆ. ಸಮುದಾಯದಲ್ಲಿ ಸ್ಥಳಾಂತರವಿಲ್ಲದೆ ತಮ್ಮ ಸಾಮಾಜಿಕ ಹಾಗೂ ಸಾಂಸ್ಕøತಿಕ ಪರಿಸರದಲ್ಲಿಯೇ ಮಕ್ಕಳು ಬೆಳೆಯಲು ಅವಕಾಶ ಪಡೆಯುವುದನ್ನು ಖಾತರಿಪಡಿಸಲು ಇದೊಂದು ಷರತ್ತುಬದ್ಧ ಸಹಾಯವಾಗಿದೆ.
ಈ ಯೋಜನೆಯ ಫಲಾನುಭವಿಯಾಗಲು ಹಲವು ಮಾನದಂಡಗಳಿದ್ದು ಈ ಪ್ರಕಾರ ಮಕ್ಕಳು ಅನಾಥವಾಗಿದ್ದರೆ ಹಾಗೂ ವಿಸ್ತøತ ಕುಟುಂಬದೊಡನೆ ಜೀವಿಸುತ್ತಿದ್ದರೆ, ಪೋಷಕರು ಜೀವಕ್ಕೆ ಬೆದರಿಕೆ ಒಡ್ಡುವ, ಗಂಭೀರ ಸ್ವರೂಪದ ಕಾಯಿಲೆಯ ಸಂತ್ರಸ್ತರಾಗಿದ್ದರೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಬಾಲಸ್ವರಾಜ್ ಪೋರ್ಟಲ್ನಲ್ಲಿ ನೊಂದಾಯಿಸಲಾದ ಮಕ್ಕಳು, ಪೋಷಕರು/ತಾಯಿ ವಿಧವೆ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕ ಹಾಗೂ ದೈಹಿಕವಾಗಿ ಅಸಮರ್ಥರಾಗಿದ್ದು ಈ ಮಕ್ಕಳು ಮಕ್ಕಳ ನ್ಯಾಯಾಲಯ, ಮಕ್ಕಳ ಕಲ್ಯಾಣ ಸಮಿತಿಯಿಂದ ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಸೆಕ್ಷನ್ 14ರಂತೆ ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಗುವೆಂದು ಘೋಷಿಸಲ್ಪಟ್ಟ ಮಕ್ಕಳು ಮತ್ತು ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಪಾಲನಾ ಸಂಸ್ಥೆಯ ಮಕ್ಕಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯೋಜನೆ ಬಗ್ಗೆ ತಿಳಿಯದೆ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಪ್ಪು ಮಾಹಿತಿಯನ್ನು ಹರಡುತ್ತಿರುವುದು ಸರಿಯಲ್ಲ. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ-127 ರಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.ಸಂ 08226-222354 ಅನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.