ನವದೆಹಲಿ: ಫೆಂಗಲ್ ಚಂಡಮಾರುತದಿಂದ ತಮಿಳು ನಾಡಿನ ಹಲವು ಜಿಲ್ಲೆಗಳಲ್ಲಿ ಸಾವು-ನೋವು ಉಂಟಾಗಿದ್ದು, ಬೆಳೆನಷ್ಟ, ಜನಜೀವನ ಅಸ್ತವ್ಯಸ್ತವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಸ್ಟಾಲಿನ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಭಾರೀ ಮಳೆಯ ನಂತರ ಉತ್ತರ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯು ಪ್ರವಾಹಕ್ಕೆ ಒಳಗಾಗಿದೆ, ಸೇತುವೆಗಳು ಮತ್ತು ರಸ್ತೆಗಳು ಮುಳುಗಿಹೋಗಿದ್ದರಿಂದ ಹಳ್ಳಿಗೆ, ವಸತಿ ಕಾಲೊನಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ, ರೈತರ ಬೆಳೆದು ನಿಂತಿರುವ ಬೆಳೆಗಳು ಮುಳುಗಿ ಹೋಗಿವೆ.
ತಿರುವಣ್ಣಾಮಲೈನಲ್ಲಿ, ಮೊನ್ನೆ ಡಿಸೆಂಬರ್ 1ರಂದು ರಾತ್ರಿ ಮಳೆಗೆ ಬೆಟ್ಟದಿಂದ ಬಂಡೆ ಮನೆಯೊಂದರ ಮೇಲೆ ಬಿದ್ದು ಏಳು ಮಂದಿ ಸಿಲುಕಿಹಾಕಿಕೊಂಡಿದ್ದು ಐವರ ಮೃತದೇಹ ಹೊರತೆಗೆಯಲಾಗಿದೆ. ಫೆಂಗಲ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತುರ್ತು ಮರುಸ್ಥಾಪನೆ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (NDRF) 2,000 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಎಂ ಕೆ ಸ್ಟಾಲಿನ್ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದ್ದರು.
ಹಾನಿಯ ಪ್ರಾಥಮಿಕ ಅಂದಾಜಿನ ಪ್ರಕಾರ, ತಾತ್ಕಾಲಿಕ ಮರುಸ್ಥಾಪನೆ ಪ್ರಯತ್ನಗಳಿಗೆ 2,475 ಕೋಟಿ ರೂಪಾಯಿ ಅಗತ್ಯವಿದೆ ಎಂದು ಸಿಎಂ, ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹಾನಿಯ ಸಮಗ್ರ ಮೌಲ್ಯಮಾಪನವನ್ನು ಕೈಗೊಳ್ಳಲು ಆದಷ್ಟು ಬೇಗ ಕೇಂದ್ರ ತಂಡವನ್ನು ನಿಯೋಜಿಸುವಂತೆ ಅವರು ಮೋದಿಯವರಿಗೆ ಮನವಿ ಮಾಡಿದ್ದಾರೆ.