ಬಾರ್ಬಡೋಸ್: ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಬಾರ್ಬಡೋಸ್ನಿಂದ ತವರಿಗೆ ಪ್ರಯಾಣ ಬೆಳೆಸಿದೆ. ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಬುಧವಾರ ಖಚಿತಪಡಿಸಿದೆ. ಟಿ20 ವಿಶ್ವಕಪ್ ಟ್ರೋಫಿಯ ವಿಡಿಯೊ ಹಾಕಿ ನಾವು ಮರಳುತ್ತಿದ್ದೇವೆ ಎಂದು ಬರೆದುಕೊಂಡಿದೆ.
ಬುಧವಾರ ಬಾರ್ಬಡೋಸ್ನಿಂದ ಹೊರಡಿರುವ ಟೀಮ್ ಇಂಡಿಯಾ ಗುರುವಾರ ಬೆಳಗ್ಗೆ ನವದೆಹಲಿಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.
ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳಲಿದ್ದಾರೆ. ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು. ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು.
ಅಲ್ಲದೇ ಬಾರ್ಬಡಾಸ್ನಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು. ಜತೆಗೆ ವಿಮಾನ ನಿಲ್ದಾಣಗಳು ಬಂದ್ ಆಗಿತ್ತು. ಹೀಗಾಗಿ ಭಾರತ ತಂಡ ಬಾರ್ಬಡೋಸ್ನ ಹೊಟೇಲ್ನಲ್ಲಿ ತಂಗಿತ್ತು.