ಬೆಂಗಳೂರು: ರಾಜ್ಯಭಾರತೀಯ ಜನತಾಪಾರ್ಟಿಯಲ್ಲಿ ನಡೆಯುತ್ತಿರುವ ಕಲಹ ತಾರಕಕ್ಕೇರಿದೆ.ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬೆಂಬಲಿಸಿ ಪಕ್ಷದ ಮಾಜಿ ಶಾಸಕರು ಹಮ್ಮಿಕೊಂಡಿರುವ ದೇಗುಲ ದರ್ಶನ ಕಾರ್ಯಕ್ರಮ ಮುಂದುವರಿದಿದೆ.
ನಿನ್ನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಜಯೇಂದ್ರ ಬೆಂಬಲಿಗರೆನ್ನಲಾದ ಮಾಜಿ ಶಾಸಕರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಮಾಜಿ ಶಾಸಕರ ತಂಡದಲ್ಲಿದ್ದ ಬಿ.ಸಿ.ಪಾಟೀಲ್, ಎಂಪಿ. ರೇಣುಕಾಚಾರ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಆಂತರಿಕ ದುಷ್ಟ ಶಕ್ತಿಗಳಿವೆ. ಅವುಗಳ ಧಮನಕ್ಕಾಗಿ ದೇವರ ಪೂಜೆ ಮಾಡಿಸುತ್ತಿದ್ದೇವೆ ಎಂದಿದ್ದಾರೆ.
ಎಂಪಿ ರೇಣುಕಾಚಾರ್ಯ ಮಾತನಾಡಿ, ಶೀಘ್ರದಲ್ಲಿಯೇ ಪಕ್ಷದಿಂದ ಬಸವನಗೌಡ ಪಾಟೀಲ್ ಅವರನ್ನು ಉಚ್ಛಾಟಿಸಲಾಗುವುದು. ಈ ಕೆಲಸ ಶೀಘ್ರದಲ್ಲಿಯೇ ಆಗಲಿದೆ ಎಂದು ಹೇಳಿದ್ದಾರೆ.ಬಿ.ಸಿ.ಪಾಟೀಲ್ ಮಾತನಾಡಿ, ಪಕ್ಷದಲ್ಲಿ ಆಂತರಿಕ ಶತ್ರುಗಳ ಕಾಟ ಹೆಚ್ಚಾಗಿದೆ. ಬಾಹ್ಯ ಶತ್ರುಗಳಾಗಿದ್ದರೆ ಒಂದೇ ಬಾರಿಗೆ ತೊಡೆದು ಹಾಕಬಹುದಿತ್ತು ಎಂದಿದ್ದಾರೆ.
ಇತ್ತ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ನಿನ್ನೆ ದೆಹಲಿಗೆ ತೆರಳಿದ್ದು, ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಇದೇ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಪಕ್ಷದ ವತಿಯಿಂದ ನಡೆಸುವ ಸಮಾವೇಶದ ಬಗ್ಗೆಯೂ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಿನದಿಂದ ದಿನಕ್ಕೆ ಪಕ್ಷದಲ್ಲಿನ ಆಂತರಿಕ ಕಲಹ ಹೆಚ್ಚಾಗುತ್ತಿದ್ದು, ಪಕ್ಷದ ವರಿಷ್ಠರು ಶೀಘ್ರದಲ್ಲಿಯೇ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕೆಂದು ಕೆಲ ಪಕ್ಷ ನಿಷ್ಠಾವಂತ ಮುಖಂಡರು ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.