ದೊಡ್ಡಬಳ್ಳಾಪುರ: ನಗರದ ಸಿವಿಲ್ ನ್ಯಾಯಾಲಯ ದಲ್ಲಿ ಶನಿವಾರ ನಡೆದ ಲೋಕ ಆದಾಲತ್ನಲ್ಲಿ ವಿಚ್ಛೇದನ ಕೋರಿ ಬಂದ ಜೋಡಿ, ಒಂದಾಗಿದೆ.
ವಿವಾಹವಾದ ನಾಲ್ಕು ವರ್ಷಕ್ಕೆ ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ನಗರದ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ನ್ಯಾಯಾದೀಶರು ತಿಳಿಹೇಳುವ ಮೂಲಕ ದಂಪತಿಗಳನ್ನು ಮತ್ತೆ ಒಂದಾಗಿಸಿದರು.
ಬಳಿಕ ಹೂವಿನ ಹಾರ ಹಾಕಿಸಿ ಮನೆಗೆ ಕಳುಹಿಸಿ ಕೊಟ್ಟರು. ತಾಲ್ಲೂಕಿನ ಕನಸವಾಡಿ ಗ್ರಾಮದ ಅರುಣ್ ಕುಮಾರ್ ಮತ್ತು ಶ್ಯಾನಭೋಗನಹಳ್ಳಿ ಗ್ರಾಮದ ನವ್ಯಶ್ರಿ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಸಣ್ಣಪುಟ್ಟ ಮನಸ್ತಾಪಗಳಿಂದ ಎರಡು ವರ್ಷಗಳ ಹಿಂದೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸುಮಾರು ಎರಡು ವರ್ಷಗಳ ವಿಚಾರಣೆ ನಂತರ ಶನಿವಾರ ನಡೆದ ಅದಾಲತ್ನಲ್ಲಿ ಜೋಡಿಗೆ ನ್ಯಾಯಾಧೀಶರು ಹೇಳಿದ ಬುದ್ದಿ ಮಾತಿಗೆ ಗೌರವ ನೀಡಿ ಮತ್ತೆ ಒಂದಾಗಿದ್ದಾರೆ.
ಸ್ವತಃ ನ್ಯಾಯಾಧೀಶರು ಮತ್ತು ವಕೀಲರೇ ಮುಂದೆ ನಿಂತು ಮತ್ತೆ ಬದುಕಿನಲ್ಲಿ ಯಾವುದೇ ಮನಸ್ತಾಪವಾಗದಂತೆ ಜೀವನ ನಡೆಸುವಂತೆ ಹಾರೈಸಿ ಸಿಹಿ ತಿನ್ನಿಸಿ ಶುಭಕೋರಿದರು.4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ದುರುಗಪ್ಪ ಏಕಬೋಟೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್.ಎ.ಶಿಲ್ಪ, ,ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರೇಮ್ಕುಮಾರ್, ಅಪರ ಸಿವಿಲ್ ನ್ಯಾಯಾಧೀಶರಾದ ರವಿಬೆಟಗಾರ್ ಹಾಗೂ ವಕೀಲರು ಇದ್ದರು.