`ಪುಸ್ತಕಗಳು ಸುಲಭವಾಗಿ ಕೊಂಡೊಯ್ಯಬಲ್ಲ ಅದ್ವಿತೀಯ ಜಾದು’ – ಸ್ಟೀಫನ್ ಕಿಂಗ್ ರ ಇಂಗ್ಲೀಷಿನ ಈ ವಾಕ್ಯ ಎಷ್ಟು ಅರ್ಥಪೂರ್ಣ ಎಂಬುದು ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸವಿರುವವರಿಗೆ ಚೆನ್ನಾಗಿ ತಿಳಿದಿರುತ್ತದೆ.ಕೆಲವು ಪುಸ್ತಕಗಳು ನಮಗೆ ಬೇಕಾಗಿರುವ ವಿಷಯಗಳ ಮಾಹಿತಿಯನ್ನು ನೀಡಿದರೆ, ಕೆಲವು ಪುಸ್ತಕಗಳು ಗಂಭೀರವಾಗಿಯೂ, ಇನ್ನು ಕೆಲವು ಕಾದಂಬರಿಗಳು ಕುತೂಹಲ ಕೆರಳಿಸುತ್ತಲೂ ಓದಿಸಿಕೊಂಡು ಹೋಗುತ್ತವೆ.
ಆದರೆ ಇದಾವುದೂ ಅಲ್ಲದೇ ಮನಸ್ಸನ್ನು ಹಗುರಗೊಳಿಸಿ, ಸಂತಸವುಕ್ಕಿಸುತ್ತಾ, ಕೆಲವೊಮ್ಮೆ ಕಿಸಕ್ಕನೆ ನಗಿಸುತ್ತಾ ಆನಂದಲೋಕಕ್ಕೆ ಕರದೊಯ್ಯವ ಪುಸ್ತಕಗಳೂ ಬಹಳ ಸೊಗಸು. ಹಾಸ್ಯ ಲೇಖನಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ.ಈಗ ನಾನು ತಿಳಿಸಹೊರಟಿರುವುದು ಇದೇ ರೀತಿಯ ಹಾಸ್ಯಗಳ ಖಜಾನೆಯ ಒಂದು ಪುಟ್ಟ ಪುಸ್ತಕ ,ಹಾಸ್ಯ ಸಾಹಿತಿ ಶ್ರೀ ಎಂ.ಎಸ್.ನರಸಿಂಹಮೂರ್ತಿಯವರ `ನಗೆ ಸಿಮ್ಮು’.
ಹೆಸರಲ್ಲೇ ಹಾಸ್ಯವನ್ನು ಹೊತ್ತಿರುವ ಸೊಗಸಾದ ಚಿಕ್ಕ ಪುಸ್ತಕ.ಸಿಮ್ಮು ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಮೊಬೈಲ್ SIM ಅದಿಲ್ಲದೇ ಮೊಬೈಲ್ ಇದ್ದೂ ಹೆಚ್ಚಿನ ಪ್ರಯೋಜನವಿಲ್ಲ.ಹಾಗೆಯೇ ನಗು, ಹಾಸ್ಯ ಇಲ್ಲದ ಜೀವನಕ್ಕೇನು ಅರ್ಥ !ಅದಕ್ಕಾಗಿಯೇ ಉತ್ತಮ ಹಾಸ್ಯ ಬರೆಹಗಳನ್ನೋದಬೇಕು.ನಗೆಲೋಕದ SIM ನರಸಿಮ್ಮೂರ್ತಿಯವರ `ನಗೆ ಸಿಮ್ಮು’ಹಾಸ್ಯ ಪ್ರಿಯರು ಓದಲೇ ಬೇಕಾದ ಪುಟ್ಟ ಪುಸ್ತಕ.
ಇತ್ತೀಚೆಗೆ ತಮ್ಮ 75ನೇ ವಸಂತಕ್ಕೆ ಕಾಲಿಟ್ಟು,ಅದೇ ಸಮಯಕ್ಕೆ `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಗೆ ಭಾಜನರಾಗಿರುವ ನಾಡಿನ ಹೆಸರಾಂತ ಹಾಸ್ಯ ಸಾಹಿತಿ, ಎಂ ಎಸ್ ಎನ್. ಇವರೊಂದಿಗೆ ಒಡನಾಡಿರುವವರೆಲ್ಲರಿಗೂ ಇವರ ಸರಳತೆ ಹಾಗೂ ಹಾಸ್ಯ ಪ್ರಜ್ಞೆಯ ಬಗ್ಗೆ ಚೆನ್ನಾಗಿಯೇ ಪರಿಚಯವಿರುತ್ತದೆ.
ಇವರ ಈ ಪುಸ್ತಕವೂ ಹಾಗೆಯೇ.
ಸರಳ ಹಾಗೂ ಸತ್ವಭರಿತ.ಹತ್ತು ಸಹಸ್ರ ಎಪಿಸೋಡುಗಳಿಗೆ ನಗೆ ಮುತ್ತುಗಳನ್ನು ಪೋಣಿಸಿದಾಖಲೆಯನ್ನು ನಿರ್ಮಿಸಿರುವ `ಎಮ್ಮೆಸ್ಸೆನ್’, ಬರವಣಿಗೆ ಮತ್ತು ಹಾಸ್ಯ ಭಾಷಣಗಳ ಮೂಲಕ ಹಾಸ್ಯ ಲೋಕ ಪ್ರವೇಶಿಸಿ 50 ವರ್ಷಗಳು ಮೀರಿವೆ.ಈ ಐವತ್ತು ವರ್ಷಗಳ ಅವರ ಪಯಣದ ಹಾದಿಯಲ್ಲಿ, ಬ್ಯಾಂಕ್ ಉದ್ಯೋಗಿಯಾಗಿ, ಹಲವಾರು ಪ್ರಮುಖ ಹಾಸ್ಯ ಸಾಹಿತಿಗಳ ಒಡನಾಟದಲ್ಲಿ, ಅಂತೆಯೇ ಅವರ ವಿದೇಶ ಪ್ರವಾಸದಲ್ಲಿ ಅನುಭವಕ್ಕೆ ಬಂದ ಹಾಸ್ಯ ಪ್ರಸಂಗಗಳನ್ನು ನವಿರಾಗಿ,ಎಂದಿನಂತೆ ಅವರ ಹಾಸ್ಯರಸ ಸ್ವಾರಸ್ಯ ತುಂಬುತ್ತಾ ಅಚ್ಚುಕಟ್ಟಾಗಿ ಬಿಚ್ಚಿಟ್ಟಿದ್ದಾರೆ. ಪುಟ್ಟ ಪುಟ್ಟ ಒಟ್ಟು 120 ರಸಮಯ ಹಾಸ್ಯವನ್ನು ಈ ಸಿಮ್ಮಿನಲ್ಲಿ ಅಳವಡಿಸಿದ್ದಾರೆ.
ಅಂಗೈ ಅಳತೆಯ ಈ ಪುಸ್ತಕವನ್ನು. (ಜಂಬದ )ಚೀಲದಲ್ಲೋ, ಜೇಬಿನಲ್ಲೋ ಕೊಂಡೊಯ್ಯಲು ಸುಲಭವಾಗಿದೆ.ಕಛೇರಿಯ ಕೆಲಸದಲ್ಲಿ ದಣಿವಾದಾಗ ವಿಶ್ರಾಂತಿ ಸಮಯದಲ್ಲೋ,ಪ್ರಯಾಣ ಹೋಗುವಾಗ ದಾರಿಯಲ್ಲೋ ಓದಲು ,ಅಥವಾ ಮಕ್ಕಳು ಮೊಮ್ಮಕ್ಕಳೊಡನೆ ಹಾಸ್ಯ ಸಮಯವನ್ನು ಕಳೆಯಲೂ ಬಹಳ ಅನುಕೂಲಕರ ಪುಸ್ತಕವಾಗಿದ್ದು , ಪಂಚುಗಳ ಮಿಂಚಿನೊಂದಿಗೆ, ನಗೆಲೋಕದ ರಹದಾರಿಯ ಮೇಲೆ ಹಾಸ್ಯದ ಮಾಯಾಲೋಕಕ್ಕೆ ಕರೆದೊಯ್ಯುವುದರಲ್ಲಿ ಅನುಮಾನವೇ ಇಲ್ಲ. ಓದಿರಿ…., ನಕ್ಕು ನಲಿಯಿರಿ……