ಟೀಮ್ ಇಂಡಿಯಾ ದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಅದು ಕೂಡ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. ಇಶಾನ್ ಕಿಶನ್ ಮುಂಬರುವ ಬುಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
2023 ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಇಶಾನ್ ಕಿಶನ್ ಅವರಿಗೆ ರಣಜಿ ಟೂರ್ನಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಬಿಸಿಸಿಐ ಸೂಚನೆಯನ್ನು ನಿರ್ಲಕ್ಷಿಸಿದ್ದರಿಂದ ಅವರನ್ನು ಕೇಂದ್ರೀಯ ಒಪ್ಪಂದದಿಂದ ಕೈ ಬಿಡಲಾಗಿತ್ತು. ಇದಾದ ಬಳಿಕ ಇಶಾನ್ ಕಿಶನ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿರಲಿಲ್ಲ.
ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ಝಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧದ ಸರಣಿಗೂ ಇಶಾನ್ ಕಿಶನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ.
ಇದರಿಂದ ಎಚ್ಚೆತ್ತುಕೊಂಡಿರುವ ಇಶಾನ್ ಕಿಶನ್ ಇದೀಗ ಬುಚಿ ಬಾಬು ಟೂರ್ನಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಅದರಂತೆ ಇದೀಗ ಬುಚಿ ಬಾಬು ಟೂರ್ನಿಯಲ್ಲಿ ಜಾರ್ಖಂಡ್ ಪರ ನಾಯಕನಾಗಿ ಕಣಕ್ಕಿಳಿಯಲು ಕಿಶನ್ ಸಜ್ಜಾಗಿದ್ದಾರೆ. ಈ ಮೂಲಕ ಮುಂಬರುವ ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ ಯುವ ಎಡಗೈ ದಾಂಡಿಗ.
ಬುಚಿ ಬಾಬು ಟೂರ್ನಿಯು ಆಗಸ್ಟ್ 15 ರಿಂದ ಶುರುವಾಗಲಿದೆ. 12 ತಂಡಗಳ ನಡುವಣ ಈ ಕ್ರಿಕೆಟ್ ಕದನದ 2ನೇ ಸುತ್ತಿನ ಪಂದ್ಯಗಳು ಆಗಸ್ಟ್ 21 ರಿಂದ ಆರಂಭವಾಗಲಿದೆ. ಹಾಗೆಯೇ ಸೆಪ್ಟೆಂಬರ್ 2 ರಿಂದ ಸೆಮಿಫೈನಲ್ ಪಂದ್ಯಗಳು ಶುರುವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 8 ರಂದು ಆರಂಭವಾಗಲಿದೆ.