ನೆಲಮಂಗಲ: ಇತ್ತೀಚೆಗೆ ತಾಲ್ಲೂಕಿನ ಗ್ರಾಮಗಳ ಪ್ರದೇಶಗಳಲ್ಲಿ ಚಿರತೆಗಳ ಉಪಟಳ ಹೆಚ್ಚಾಗಿದೆ. ನಿಗಧಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರವಲ್ಲ ಕಾಡಿನಂಚಿಗೆ ಹೊಂದಿಕೊಂಡಿರುವ ಹಳ್ಳಿಗರ ನಿದ್ದೆಗೆಡಿಸುತ್ತಿವೆ.ಕಾರಣ ಈ ಭಾಗದ ಸಾಕಷ್ಟು ಜನರು ಕೃಷಿ ಮತ್ತು ಹೈನುಗಾರಿಕೆಯಿಂದ ತಮ್ಮ ಬದುಕನ್ನ ಕಟ್ಟಿಕೊಂಡು ಜೀವಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿರತೆ ಹಾವಳಿಯಿಂದ ಜನರು ಮುಕ್ತವಾಗಿ ಬದುಕುವುದಕ್ಕೆ ಕಷ್ಟವಾಗುತ್ತಿದೆ.
ಇತ್ತೀಚೆಗೆ ಶಿವಗಂಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಬಾಳು ಗೊಲ್ಲರ ಹಟ್ಟಿಯಲ್ಲಿ ಕರಿಯಮ್ಮ ಎಂಬುವರನ್ನು ಚಿರತೆಯೊಂದು ಕೊಂದು ತಿಂದಿತ್ತು.ಇದರಿಂದ ಜಾಗೃತರಾದ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಕಾಡಿಗೆ ಹೊಂದಿಕೊಂಡಂತೆ ಒಂಬತ್ತು ಕಡೆಗಳಲ್ಲಿ ಬೋನುಗಳನ್ನು ಒಡ್ಡಿದ್ದರು. ಈ ಬೋನುಗಳಿಗೆ ಕಳೆದ ಮೂರು ದಿನಗಳ ಹಿಂದೆ ದಿನವೊಂದಕ್ಕೆ ಒಂದರಂತೆ ಮೂರು ಚಿರತೆಗಳು ಬಿದ್ದಿವೆ.
ಇನ್ನೂ ಅದೆಷ್ಟು ಚಿರತೆಗಳು ಇಲ್ಲಿವೆಯೋಎನ್ನುವ ಅನುಮಾನ ಗ್ರಾಮಸ್ಥರುಗಳು ವ್ಯಕ್ತಪಡಿಸುವ ಹೊತ್ತಿಗೆ ಸಮೀಪದ ತಿಪ್ಪಸಂದ್ರ, ಹೊನ್ನರಾಯನಹಳ್ಳಿ ಬಳಿಯ ಗುಡ್ಡ ಪ್ರದೇಶದಲ್ಲಿ ಬೆಳಗಿನಲ್ಲಿಯೇ ರಾಜಾ ರೋಷವಾಗಿ ಚಿರತೆ ಯೊಂದು ಅಡ್ಡಾಡುವ ದೃಶ್ಯ ದಾರಿ ಹೋಕರ ಮೊಬೈಲ್ ಕ್ಯಾಮೆರಾ ದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡಿದ್ದು, ವೈರಲ್ ಆದ ವಿಡಿಯೋನಿಂದ ಜನರಲ್ಲಿ ಮತ್ತಷ್ಟು ಗಾಬರಿ ಯನ್ನು ಉಂಟು ಮಾಡಿದೆ.
ನೆನ್ನೆಯಷ್ಟೇ ಸೋಲದೇವನಹಳ್ಳಿ ನಟ ವಿನೋದ್ರಾಜ್ಕುಮಾರ್ ಅವರ ತೋಟದ ಮನೆಯ ಬಳಿಯೇ ಇರುವ ಮನೆಗೆ ರಾತ್ರಿ ವೇಳೆ ಚಿರತೆ ನುಗ್ಗಿದ್ದು ರಾಜಣ್ಣ(ಬೈಲಪ್ಪ) ಎಂಬುವರಿಗೆ ಸೇರಿದ ನಾಯಿ ಮೇಲೆ ಚಿರತೆ ದಾಳಿ ಮಾಡಿದೆ ನಾಯಿ ಚಿರತೆ ದಾಳಿಯಿಂದ ಪಾರಾಗಿರುವ ದೃಶ್ಯ. ಈ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಅಲ್ಲಿನ ಗ್ರಾಮಸ್ಥರ ನಿದ್ದೆ ಕೆಡಿಸಿದೆ.
ಈ ಭಾಗದಲ್ಲಿ ಚಿರತೆಗಳು ಇನ್ನೆಷ್ಟು ವಾಸಿಸುತ್ತಿರಬಹುದು…? ಎನ್ನುವ ಆತಂಕ ಜನರದ್ದಾಗಿದೆ. ಸುತ್ತಾಮುತ್ತ ಇನ್ನೂ ಸಾಕಷ್ಟು ಚಿರತೆಗಳು ಕಂಡು ಬಂದಿದ್ದು ಅವುಗಳ ಕಾರ್ಯಾಚರಣೆ ಯನ್ನು ಮಾಡುತ್ತೇವೆ ಎಂದು ಅರಣ್ಯಾಧಿಕಾರಿಗಳು ಜನರಿಗೆ ಧೈರ್ಯ ಹೇಳುತ್ತಾರೆ.ಆದರೆ…, ಈ ಹಿಂದೆಯೂ ಸಾಕಷ್ಟು ಜನರ ಮೇಲೆ ಚಿರತೆಗಳ ದಾಳಿಯಾಗಿದೆ. ಇತ್ತೀಚೆಗಷ್ಟೇ ಒಬ್ಬರನ್ನು ಬಲಿ ಪಡೆದಿದೆ. ಇಷ್ಟೆಲ್ಲ ನೆಡೆಯುತ್ತಿರುವಾಗ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಲೇ ಬೇಕಿದೆ ಮತ್ತು ಗ್ರಾಮೀಣ ಜನರ ಜೀವನಕ್ಕೆ ಅಡ್ಡಿಯಾಗುತ್ತಿರುವ ವನ್ಯ ಮೃಗಗಳಿಂದ ರಕ್ಷಣಾವಸ್ಥೆಗೆ ಇಲಾಖೆ ಮುಂದಾಗಬೇಕಿದೆ ಎಂಬುದು ಜನತೆಯ ಕೂಗಾಗಿದೆ.
ಈಗ ಸೆರೆಯಾಗಿರುವ ಮೂರು ಚಿರತೆ ಗಳನ್ನು ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನ ವನಕ್ಕೆ ರವಾನಿಸಿದ್ದಾರೆಂಬ ಮಾಹಿತಿಯಿದೆ.
ಈ ಮಧ್ಯೆ ಅರಣ್ಯಾಧಿಕಾರಿ ಮಾಧ್ಯಮ ದವರೊಂದಿಗೆ ಮಾತನಾಡಿ ನೆಲಮಂಗಲ ತಾಲ್ಲೂಕಿನಲ್ಲಿ ಸುಮಾರು ಎರಡು ಸಾವಿರಎಕರೆಗಳಷ್ಟು ಅರಣ್ಯ ಪ್ರದೇಶ ಒತ್ತೂವರಿ ಯಾಗಿದೆ. ಈ ಬಗ್ಗೆ ಇಲಾಖೆ ಯಿಂದ ಪ್ರಕರಣ ಗಳನ್ನು ದಾಖಲಿಸಿದ್ದು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಅರಣ್ಯದ ಜಾಗವನ್ನು ಒತ್ತೂವರಿ ಮಾಡಿ ಕೊಂಡಿರುವುದರಿಂದ ಮತ್ತು ಅವುಗಳಿಗೆ ಆಹಾರವಾಗಿ ಸಿಗಬೇಕಾದ ಮೊಲ, ಕಾಡುಹಂದಿ ಇತರೆ ಪ್ರಾಣಿಗಳನ್ನು ಜನರೇ ಭೇಟೆಯಾಡುತ್ತಿರುವ ಹಿನ್ನೆಲೆಯಲ್ಲಿ ಚಿರತೆಗಳು ಮತ್ತು ಇತರೆ ಪ್ರಾಣಿಗಳು ಊರುಗಳತ್ತ ಆಹಾರಕ್ಕಾಗಿ ಧಾವಿಸುತ್ತಿವೆ. ಪ್ರಾಣಿಗಳನ್ನು ಬೇಟೆಯಾಡುವುದು ತಪ್ಪು, ಅರಣ್ಯ ಕಾಯ್ದೆ ತುಂಬಾ ಶಕ್ತಿಯುತವಾಗಿದೆ.
ಇಲಾಖೆಯು ಅಂತಹವರನ್ನು ಕಾನೂನು ಚೌಕಟ್ಟಿನಲ್ಲಿ ಹಿಡಿಯುತ್ತದೆ ಎಂದು ತಿಳಿದಿದ್ದರೂ ಸಹ ಭೇಟೆ ಯಾಡುತ್ತಿದ್ದಾರೆ. ಇದರ ಹಿನ್ನೆಲೆ ಅರಿಯಬೇಕು, ಇಲಾಖೆಯ ಜೊತೆಗೆ ಕೈಜೋಡಿಸಬೇಕು. ಹಾಗೆ ಚಿರತೆಯಾಗಲಿ, ಇತರೆ ಪ್ರಾಣಿಗಳ ಜೊತೆಗೆ ಜೀವನಕ್ರಮದಂತೆ ಮನುಷ್ಯರು ಸಹ ಹೊಂದಿಕೊಂಡು ಬದುಕ ಬೇಕು. ಜನತೆ ಜಾಗೃತಿಯನ್ನು ಹೊಂದಬೇಕು ಎಂಬುದು ಅವರ ಮಾತಾಗಿತ್ತು.
ಜಾಗೃತಿ ಮೂಡಿಸಿ: ಸಹಜ ಜೀವನದಲ್ಲಿ ಕಾಡು ಪ್ರಾಣಿಗಳ ಜೊತೆಗೆ ಹೊಂದಿಕೊಂಡು ಜೀವಿಸುವುದು ಸುಲಭದ ಮಾತಲ್ಲ. ಆದರೂ ಮನುಷ್ಯನು ಸಂಘಜೀವಿ ಯಾಗಿದ್ದು, ಜಾಗೃತ ಮನೋಭಾವ ತಾಳಬೇಕಿದೆ. ಆದರೆ ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರಲ್ಲಿ ಕಾಡು ಪ್ರಾಣಿಗಳ ಬಗ್ಗೆ ಹೆಚ್ಚು ಮಾಹಿತಿ ಯನ್ನು ಕೊಡುವ ಮತ್ತು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಸ್ವಯಂ ಕಾರ್ಯಕ್ಕಿಳಿಯ ಬೇಕಿದೆ.
“ಕಾಡು ಬೆಳೆಸಿ, ನಾಡನ್ನು ಉಳಿಸಿ” ಎಂಬಂತೆ “ಕಾಡನ್ನುಳಿಸಿ,ಪ್ರಾಣಿಗಳನ್ನು ಅದರೊಳಗಿರಿಸಿ” ಎಂಬ ದೃಢವಾದ ನಿರ್ಧಾರವನ್ನು ಜನರೊಟ್ಟಿಗೆ ಅರಣ್ಯ ಇಲಾಖೆ ಕೈಗೊಳ್ಳುವುದು ಅನಿವಾರ್ಯ ವಾಗಿದೆ. ಇದಕ್ಕೆ ಪೂರಕವಾಗಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಗಳ ಪ್ರಮುಖರು, ಶಾಸಕರು, ತಾಲ್ಲೂಕು ಅಡಳಿತ ಸ್ಪಂದಿಸಬೇಕಿದೆ.
ಅಗತ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನೆರವಿತ್ತು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವಂತಹ ಪರಿಕಲ್ಪನೆಯಡಿ ಕಾರ್ಯೊನ್ಮುಖರಾದಾಗ ಪರಿಹಾರ ಕಾಣಬಹುದೆಂಬುದು ಆಶಯವಾಗಿದೆ.ಪದೇ ಪದೇ ಗ್ರಾಮಕ್ಕೆ ಭೇಟಿ ನೀಡುವ ಚಿರತೆಯ ಉಪಟಳ ಚ್ಚಾಗುತ್ತಿದ್ದು, ಕೂಡಲೇ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹ ಪಡಿಸಿದ್ದಾರೆ.ಸುತ್ತಮುತ್ತಲಿನ ಎಲ್ಲ ಬಡಾವಣೆಗಳ ನಿವಾಸಿಗಳು ರಾತ್ರಿ ವೇಳೆ ಒಂಟಿಯಾಗಿ ಹೊರ ಹೋಗದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.