ಮಧುಗಿರಿ: ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಲೆಗೈದ ಆರೋಪಿ ಪತಿಗೆ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಾದವ.ಕೆ ರವರು ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದ್ದಾರೆ.
ತಾಲ್ಲೂಕಿನ ಬಡವನಹಳ್ಳಿ ವ್ಯಾಪ್ತಿಯ ಉಮಾನಹಳ್ಳಿಯ ಜಮೀನಿನಲ್ಲಿದ್ದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆರೋಪಿ ಬಸವರಾಜ, ಹೆಂಡತಿ ಸಾವಿತ್ರಮ್ಮ, ಮಕ್ಕಳು ಆಗಾಗ ಬಂದು ಪೂಜೆ ಮಾಡಿಸಿಕೊಂಡು ರಾತ್ರಿ ದೇವಸ್ಥಾನದಲ್ಲಿ ಉಳಿದುಕೊಂಡು ಹೋಗುತ್ತಿದ್ದರು. 2020 ಮಾರ್ಚ್ 23 ರಂದು ಬಸವರಾಜು ಮತ್ತು ಸಾವಿತ್ರಮ್ಮ ಹಾಗೂ ಮಗಳು ದೇವಸ್ಥಾನಕ್ಕೆ ಮಾ.24ರಂದು ಕರೊನಾ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ವಾಹನ ಸಂಚಾರ ಇಲ್ಲದ್ದರಿಂದ ದೇವಸ್ಥಾನದಲ್ಲಿ ಉಳಿದುಕೊಂಡಿದ್ದ. ಇದಕ್ಕೂ ಮೊದಲು ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ.
ಅಂತೆಯೇ ಅಂದು ಕೂಡ ಜಗಳ ಮಾಡಿದ್ದ. ಹಾಗೆಯೇ ಮಾ.31ರ ರಾತ್ರಿ ದೇವಸ್ಥಾನದ ಪಕ್ಕದಲ್ಲಿನ ಹೊಂಗೆ ಮರದ ಕೆಳಗೆ ಅಡುಗೆ ಮಾಡುತ್ತಿದ್ದ ಪತ್ನಿ ಸಾವಿತ್ರಮ್ಮ ಜತೆ ಜಗಳ ತೆಗೆದು ಅಲ್ಲೆ ಇದ್ದ ಕಲ್ಲನ್ನು ಆಕೆಯ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದ. ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ – ಸಾಬೀತಾದ ಹಿನ್ನೆಲೆಯಲ್ಲಿ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು – ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.