ಹೊಸಕೋಟೆ: ಇಂದು ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿದ್ದು ಪುಸ್ತಕಗಳನ್ನು ಓದುವ ಅಭ್ಯಾಸ ಕುಂಠಿತಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪುಸ್ತಕಗಳನ್ನು ಓದುವುದನ್ನು ಹವ್ಯಾಸ ಮಾಡಿಕೊಂಡಲ್ಲಿ ಮಾತ್ರ ಭಾಷೆ ಬೆಳವಣಿಗೆ ಹೊಂದಲು ಸಾಧ್ಯ ಎಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ನಗರಗೆರೆ ರಮೇಶ್ ಹೇಳಿದರು.
ಅವರು ನಗರದ ಎಂಡಿಪಿ ಕಾಫಿ ಹೌಸ್ಆವರಣದಲ್ಲಿ ಏರ್ಪಡಿಸಿದ್ದ ಸಾಹಿತಿ ಬಾಗೇ ಪಲ್ಲಿ ಕೃಷ್ಣಮೂರ್ತಿರವರು ಅನುವಾದಿಸಿರುವ “ವನಮಾಲಿ” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ರವೀಂದ್ರನಾಥ್ ಟ್ಯಾಗೋರ್ರವರು ಕೇವಲ ನಾಟಕಕಾರಷ್ಟೇ ಅಲ್ಲದೆ ಕವಿ, ಶಿಕ್ಷಣ ತಜ್ಞ, ದಾರ್ಶನಿಕರಾಗಿ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆ.
ಸತಿ ಪದ್ಧತಿಯಂತಹ ಮೌಡ್ಯತೆಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಇವರ ಕೃತಿಗಳು ಪರಿಣಾಮಕಾರಿಯಾಗಿವೆ. ವಿಶ್ವಾತ್ಮಕವಾದ ಚಿಂತನೆ ಅಳವಡಿಸಿಕೊಂಡಲ್ಲಿ ಪೂರ್ಣ ಪ್ರಮಾಣದ ಮನುಷ್ಯರಾಗಿ ರೂಪುಗೊಳ್ಳಲು ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ. ಜನರಲ್ಲಿ ಪರಿಸರ ಪ್ರೇಮ, ಮಾನವೀಯತೆ, ಕ್ರಿಯಾತ್ಮಕತೆಯನ್ನು ಮೂಡಿಸುವಲ್ಲಿ ಟ್ಯಾಗೋರ್ರವರ ಕೃತಿಗಳು ಸಹಕಾರಿಯಾಗಿವೆ ಎಂದರು.
ರಾಜ್ಯ ವಿಜ್ಞಾನ ಪರಿಷತ್ನ ಮಾಜಿಕಾರ್ಯದರ್ಶಿ ಪ್ರೊ: ಎಂ.ಆರ್.ನಾಗರಾಜ್ ರವರು ಮಾತನಾಡಿ ಹವ್ಯಾಸಿ ಸಾಹಿತಿಗಳಾದ ಬಾಗೇಪಲ್ಲಿ ಕೃಷ್ಣಮೂರ್ತಿಯವರು ಭಾಷೆಯ ಬಗ್ಗೆ ಅಪಾರವಾದ ಪೀತಿ ಹೊಂದಿದ್ದು ಆಗಾಗ್ಗೆ ಕೃತಿಗಳನ್ನು ರಚಿಸುವಲ್ಲಿ ತೊಡಗುತ್ತಿರುವುದು ಪ್ರಶಂಸನೀಯ. ಪುಸ್ತಕಗಳನ್ನು ಕೊಂಡು ಓದಿದಲ್ಲಿ ಮಾತ್ರ ಇವರ ಶ್ರಮ ಸಾರ್ಥಕವಾಗಲಿದೆ ಎಂದರು.
ಲೇಖಕ, ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ಮಾತನಾಡಿ ಕೆಲವು ದಿನಗಳ ಹಿಂದೆ ಎಂಡಿಪಿ ಕಾಫಿ ಹೌಸ್ನಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 110 ವರ್ಷಗಳ ಹಿಂದೆ ಪ್ರಕಟಗೊಂಡಿರುವ ರವೀಂದ್ರನಾಥ್ ಟ್ಯಾಗೋರ್ರವರ “ಗಾರ್ಡನರ್” ಪುಸ್ತಕ ಕಂಡು ಇದನ್ನು ಕನ್ನಡಕ್ಕೆ ಅನುವಾದಿಸುವ ಆಸಕ್ತಿ ಮೂಡಿತು. ಜೀವನದಲ್ಲಿ ಪ್ರತಿಯೊಬ್ಬರು ತಾವು ಮಾಡುವ ಕೆಲಸಗಳಿಂದಾಗಿ ಒಂದಲ್ಲ ಒಂದು ರೀತಿಯಲ್ಲಿ ವನಮಾಲಿಗಳೇ ಆಗಿದ್ದಾರೆ. ಶ್ರಮಜೀವಿಗಳಲ್ಲಿ ನಿಜವಾದ ದೇವರನ್ನು
ಕಾಣಬಹುದು ಎಂಬುದು ಇದರ ಸಾರಾಂಶ ವಾಗಿದ್ದು, ಇಂತಹವರ ಬಗ್ಗೆ ನಿರ್ಲಕ್ಷ್ಯ ತೋರದೆ ಅಭಿಮಾನ ಬೆಳೆಸಿಕೊಂಡು ಗೌರವದಿಂದ ಕಾಣಬೇಕು ಎಂದನ್ನು ಮನಮುಟ್ಟುವಂತೆ ತಿಳಿಸಿದ್ದಾರೆ ಎಂದರು.