ನವದೆಹಲಿ/ಮಂಗಳೂರು: ವಾಯುವ್ಯ ಮತ್ತು ಪೂರ್ವ ಭಾರತ, ಈಶಾನ್ಯ ಪ್ರದೇಶ, ಪಶ್ಚಿಮ ಘಟ್ಟಗಳು ಮತ್ತು ಗುಜರಾತ್ನಲ್ಲಿ ವ್ಯಾಪಕವಾದ ತೀವ್ರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪ್ರಬಲ ಮಾನ್ಸೂನ್ ನಿಂದಾಗಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ ಉಂಟಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಇದರ ಜೊತೆಗೆ, ಮುಂದಿನ 4-5 ದಿನಗಳಲ್ಲಿ ವಾಯುವ್ಯ ಪ್ರದೇಶಗಳು, ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಪ್ರತ್ಯೇಕವಾದ ಅತ್ಯಂತ ಭಾರೀ ಮಳೆಯಾಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ ಕೆಲವು ದಿನಗಳವರೆಗೆ ಉತ್ತರಾಖಂಡ, ಈಶಾನ್ಯ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ನದಿಯ ಜಲಾನಯನ ಪ್ರದೇಶಗಳಲ್ಲಿ ಸ್ಥಳೀಯ ಪ್ರವಾಹಗಳು ಮತ್ತು ಭೂಕುಸಿತ ಉಂಟಾಗುವ ಸಾಧ್ಯತೆಯಿದೆ. ಜನರು ಜಲಮೂಲಗಳಿಂದ ಆದಷ್ಟು ದೂರವಿದ್ದರೆ ಉತ್ತಮ. ಸಿಕ್ಕಿಂ, ಹಿಮಾಲಯ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಉತ್ತರ ಪ್ರದೇಶವನ್ನು ಒಳಗೊಂಡಿರುವ ಪೂರ್ವ ಪ್ರದೇಶದಲ್ಲಿ ಮಧ್ಯಮ ಪ್ರಮಾಣದಿಂದ ಹೆಚ್ಚಿನ ಪ್ರವಾಹ ಉಂಟಾಗಲಿದೆ.
ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ರಾಜಸ್ಥಾನದ ಪೂರ್ವ ಭಾಗಗಳು, ದಕ್ಷಿಣ ಪ್ರದೇಶ ಪಶ್ಚಿಮ ಘಟ್ಟಗಳು ಮತ್ತು ಪಶ್ಚಿಮ ಪ್ರದೇಶ ಕೊಂಕಣ ಮತ್ತು ಗುಜರಾತ್ನ ಕೆಲವು ಜಲಾನಯನ ಪ್ರದೇಶಗಳು ಮತ್ತು ನೆರೆಹೊರೆಗಳಲ್ಲಿ ಕಡಿಮೆಯಿಂದ ಮಧ್ಯಮ ಪ್ರಮಾಣದಲ್ಲಿ ಪ್ರವಾಹದ ಅಪಾಯವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದ ಕರಾವಳಿ ಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಶನಿವಾರ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ, ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಸಂಭಾವ್ಯ ಪ್ರವಾಹ ಮತ್ತು ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಜನರು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ, ತುರ್ತು ಸೇವೆಗಳಿಗೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂಂ-1077 ಅಥವಾ ದೂರವಾಣಿ ಸಂಖ್ಯೆ 0824-2442590ಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.