ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಎಣಿಕೆ ಮುಂದುವರಿದಿದ್ದು, ಬಿಜೆಪಿ ನೇತೃತ್ವದ ಮಹಾಯುತಿಯು ಅಧಿಕಾರ ಹಿಡಿಯಲು ಬೇಕಾಗಿರುವ ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ.ಇದರೊಂದಿಗೆ ಮಹಾ ವಿಕಾಸ ಅಘಾಡಿ ಮೈತ್ರಿಯು ತೀವ್ರ ಹಿನ್ನಡೆ ಅನುಭವಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, ‘ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ಇದನ್ನು ಜನಾದೇಶ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯ ಬಣ್ಣ ಬಯಲಾಗಿದ್ದು, ಎರಡು ದಿನಗಳ ಹಿಂದೆಯಷ್ಟೇ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ. ಇದರಿಂದ ಗಮನ ಬೇರೆಡೆ ಸೆಳೆಯಲು ಯತ್ನಿಸಲಾಗುತ್ತಿದೆ. ಬಹಳ ಹಿಂದೆಯೇ ಈ ತಂತ್ರ ರೂಪಿಸಲಾಗಿತ್ತು’ ಎಂದು ಅವರು ಆರೋಪಿಸಿದ್ದಾರೆ.
288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆ 145 ಆಗಿದೆ.ಬೆಳಿಗ್ಗೆ 11 ಗಂಟೆಯ ಟ್ರೆಂಡ್ ವೇಳೆಗೆ ಮಹಾಯುತಿ 220, ಮಹಾ ವಿಕಾಸ ಅಘಾಡಿ 55 ಮತ್ತು ಇತರರು 13 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ನಮ್ಮ ಮಹಾ ವಿಕಾಸ್ ಅಘಾಡಿ (ಎಂವಿಎ) ಒಕ್ಕೂಟಕ್ಕೆ 75 ಸ್ಥಾನಗಳನ್ನೂ ನೀಡಲಾಗದ ಈ ಫಲಿತಾಂಶ ಸಂದೇಹಾಸ್ಪದ. 56 ಸ್ಥಾನಗಳಲ್ಲಿ ಏಕನಾಥ ಶಿಂದೆ ಗುಂಪು, 40 ಸ್ಥಾನಗಳಲ್ಲಿ ಅಜಿತ್ ಪವಾರ್ ಬಣ, 125 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ಸಾಧ್ಯವೇ ಇಲ್ಲ.
ಒಂದು ಪಕ್ಷವು ಮಹಾರಾಷ್ಟ್ರದಲ್ಲಿ 200 ಸ್ಥಾನಗಳನ್ನು ದಾಟುವುದೇ ಸಾಧ್ಯವಿಲ್ಲ. ಹೀಗಿರುವಾಗ ನಾವು ಈ ಫಲಿತಾಂಶವನ್ನು ಒಪ್ಪುವುದಿಲ್ಲ. ಮಹಾರಾಷ್ಟ್ರದ ಪ್ರಜೆಗಳು ಅಪ್ರಾಮಾಣಿಕರಲ್ಲ, ಆದರೆ ಬಿಜೆಪಿ ನೇತೃತ್ವದ ಮಹಾಯುತಿ ಪ್ರಾಮಾಣಿಕವಾಗಿ ಗೆಲುವು ಸಾಧಿಸಿಲ್ಲ ಎಂದು ರಾವುತ್ ವಾಗ್ದಾಳಿ ನಡೆಸಿದ್ದಾರೆ.
ಇದು ಜನಾದೇಶವಲ್ಲ, ಈ ಫಲಿತಾಂಶವನ್ನು ಗೌತಮ್ ಅದಾನಿ ತಂಡವೇ ರೂಪಿಸಿದೆ ಎಂದು ರಾವುತ್ ಕಿಡಿಕಾರಿದ್ದಾರೆ. ಅವರು (ಅದಾನಿ) ನಮ್ಮ ಕ್ಷೇತ್ರಗಳನ್ನು ಕಸಿದುಕೊಂಡಿದ್ದಾರೆ. ಇದು ಜನಾದೇಶವಲ್ಲ. ಜನರೂ ಈ ಫಲಿತಾಂಶವನ್ನು ಒಪ್ಪುವುದಿಲ್ಲ. ಇದು ಜನರ ನಿರ್ಣಯವಲ್ಲ.
ಫಲಿತಾಂಶ ಪೂರ್ತಿ ಹೊರಬರಲಿ, ನಾವು ಆಮೇಲೆ ಮಾತನಾಡುತ್ತೇವೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಹಣ ಲೆಕ್ಕ ಮಾಡುವ ಯಂತ್ರ ಸ್ಥಾಪಿಸಲಾಗಿದೆ ಎಂದು ರಾವುತ್ ದೂರಿದ್ದಾರೆ.ಮತ್ತೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ಆಗಬೇಕು. ಮಹಾರಾಷ್ಟ್ರದ ಫಲಿತಾಂಶವು ಜನಾಭಿಪ್ರಾಯದ ಮತಗಳಲ್ಲವೇ ಅಲ್ಲ. ಈ ಫಲಿತಾಂಶವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದವರು ‘ಎಕ್ಸ್’ ಖಾತೆಯಲ್ಲಿಯೂ ಬರೆದುಕೊಂಡಿದ್ದಾರೆ.