ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ `ಫೆಂಗಲ್’ ಚಂಡಮಾರುತ ಇಂದು ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡಿನ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ಇಂದು ಮಧ್ಯಾಹ್ನ ಪುದುಚೇರಿ ಕರಾವಳಿಗೆ `ಫೆಂಗಲ್’ ತಲುಪಬಹುದು. ಇದರ ಪರಿಣಾಮದಿಂದಾಗಿ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಮತ್ತು ಗಾಳಿಯ ವೇಗ ಗಂಟೆಗೆ 90 ಕಿಲೋಮೀಟರ್ ವರೆಗೆ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಈ ಅವಧಿಯಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳಬಹುದು. ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ, ಕೇರಳ ಮತ್ತುಕರ್ನಾಟಕದ ಒಳನಾಡಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಇದ್ದು, ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.ಪುದುಚೇರಿ ಬಳಿಯ ಕಾರೈಕಲ್ ಮತ್ತು ಮಹಾಬಲಿಪುರಂ ನಡುವಿನ ಕ್ರಾಸಿಂಗ್ ಪಾಯಿಂಟ್ನಲ್ಲಿರುವ ಬಹುತೇಕ ಕರಾವಳಿ ಜಿಲ್ಲೆಗಳ ಮೇಲೆ ಫೆಂಗಲ್ ಸೈಕ್ಲೋನ್ನ ಪರಿಣಾಮ ಹೆಚ್ಚಾಗಿರಲಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಡಾ. ಎಸ್ ಬಾಲಚಂದ್ರನ್ ತಿಳಿಸಿದ್ದಾರೆ.
ತಮಿಳುನಾಡು ಕರಾವಳಿಯಲ್ಲಿ ಜೋರಾದ ಗಾಳಿ ಸಹಿತ ಭಾರೀ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ 60-70 ಕಿ.ಮೀ ನಿಂದ 90 ಕಿ.ಮೀ. ವರೆಗೆ ಇರಲಿದೆ. ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ಭಾರೀ ಮಳೆಯಾಗಲಿದೆ.