ಬ್ರಿಸ್ಬೇನ್: ಒಂದೆಡೆ ಪುರುಷರ ತಂಡ ಪರ್ತ್ ಟೆಸ್ಟ್ ನಲ್ಲಿ ಗೆದ್ದು ಅಡಿಲೇಡ್ ಟೆಸ್ಟ್ ನಲ್ಲೂ ಕಾಂಗರೂಗಳ ಮೇಲೆ ಸವಾರಿ ಮಾಡಲು ಸನ್ನದ್ಧವಾಗಿದ್ದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮಹಿಳೆಯರ ತಂಡ ಭಾರೀ ಪರಾಜಯ ಅನುಭವಿಸಿದೆ. ಆಸ್ಪ್ರೇಲಿಯಾ ವಿರುದ್ಧ ಕಳಪೆ ಪ್ರದರ್ಶನ ತೋರಿದ ಪ್ರವಾಸಿ ಭಾರತೀಯ ವನಿತೆಯರ ತಂಡ ಗುರುವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳ ಸೋಲು ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ನಾಯಕಿ ಹರ್ಮನ್ಪ್ರೀತ್ ಪಡೆ 34.2 ಓವರ್ಗಳಲ್ಲಿ 100 ರನ್ಗಳಿಗೆ ಸರ್ವಪತನ ಕಂಡಿದ್ದು ಸೋಲಿಗೆ ಮುನ್ನುಡಿ ಬರೆಯಿತು. ಭಾರತದ ಪಾಳಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್ (23) , ಹರ್ಲಿನ್ ಡಿಯೋಲ್ (19) ನಾಯಕಿ ಹರ್ಮನ್ ಪ್ರೀತ್ ಕೌರ್(17), ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅವರನ್ನು ಹೊರತುಪಡಿಸಿದರೆ ಬೇರಾರೂ ಎರಡಂಕೆಯ ಮೊತ್ತವನ್ನೂ ತಲುಪಲಿಲ್ಲ.
ಮೆಗನ್ ಶಟ್ ಮಾರಕ ದಾಳಿ: ಅತಿಥೇಯ ತಂಡದ ಬೌಲರ್ ಮೆಗನ್ ಶಟ್ ಪಂಚ ವಿಕೆಟ್ ಸಾಧನೆಗೈದು ಭಾರತೀಯ ಬ್ಯಾಟರ್ಗಳನ್ನು ನಿಯಂತ್ರಿಸಿದರು. ಕಿಮ್ ಗರ್ತ್, ಆ್ಯಶಿ ಗಾರ್ಡನರ್, ಅನ್ನಾಬೆಲ್ ಸದರ್ ಲ್ಯಾಂಡ್, ಅಲಾನಾ ಕಿಂಗ್ ತಲಾ 1 ವಿಕೆಟ್ ಬಳಿಸಿದರು.ನೂರು ರನ್ಗಳ ಗುರಿ ಬೆನ್ನಟ್ಟಿದ ಆಸೀಸ್ ಪರ ಜಾರ್ಜಿಯ ವೊಲ್( 46*), ಫೀಬಿ ಲಿಚ್ಫೀಲ್ಡ್ (35) ಉತ್ತಮ ಹೋರಾಟ ಪ್ರದರ್ಶಿಸಿ ತಂಡ ಗೆಲುವಿನ ಗೆರೆ ದಾಟಲು ಸಹಕರಿಸಿದರು. ಅಂತಿಮವಾಗಿ 16.2 ಓವರ್ಗಳಲ್ಲಿ ಆಸ್ಪ್ರೇಲಿಯಾ ವನಿತೆಯರ ತಂದ ಗುರಿ ಮುಟ್ಟಿ ಜಯ ಗಳಿಸಿತು.
19 ರನ್ ಗಳಿಗೆ ಭಾರತದ ಐದು ವಿಕೆಟ್ ಗಳಿಸಿದ ಮೆಗನ್ ಶಟ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 3 ಪಂದ್ಯಗಳ ಸರಣಿಯಲ್ಲ ಆಸ್ಟ್ರೇಲಿಯಾ ಇದೀಗ 1-0 ಮುನ್ನಡೆ ಸಾಧಿಸಿದೆ. ಸರಣಿಯ ಮುಂದಿನ ಪಂದ್ಚವೂ ಡಿಸೆಂಬರ್ 8ರಂದು ಬ್ರಿಸ್ಬೇನ್ ನಲ್ಲಿ ನಡಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ 11ರಂದು ವಾಕಾದಲ್ಲಿ ನಡೆಯಲಿದೆ.



