ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ಪ್ರಕರಣದ ತನಿಖೆಯಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ತನಿಖೆಯನ್ನು ಸಿಬಿಐನಂತಹ ಸ್ವತಂತ್ರ ತನಿಖಾ ಸಂಸ್ಥೆಗೇಕೆ ವಹಿಸಬಾರದು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಪ್ರಕರಣದ 7 ಮತ್ತು 8ನೇ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಪೀಠ, ಸರ್ಕಾರದ ತನಿಖೆಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು.
ಕಳೆದ 20 ತಿಂಗಳಿಂದ ನಾಲ್ವರು ಆರೋಪಿಗಳನ್ನು ವಿಚಾರಣೆಗೆ ಕರೆದಿಲ್ಲ ಎಂದು ಆರೋಪಿಗಳ ಪರ ವಕೀಲರು ಆರೋಪಿಸಿದ್ದಾರೆ. ಬಂಧನದಿಂದ ರಕ್ಷಣೆಗಾಗಿ ಅವರು ಜಾಮೀನು ಕೂಡ ಪಡೆದಿಲ್ಲ. ಇದು ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎನ್ನುವುದನ್ನು ತೋರಿಸುತ್ತದೆ.
ಅಲ್ಲದೇ, ಪ್ರಕರಣ ಕುರಿತು ರಾಜ್ಯ ಸರ್ಕಾರವು ಬಸವನ ಹುಳ ತೆವಳುವಂತೆ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದೆ. 100 ಕೋಟಿಗೂ ಅಧಿಕ ಮೊತ್ತದ ಹಗರಣದ ತನಿಖೆಯ ನಿಧಾನಗತಿಯನ್ನು ಪರಿಗಣಿಸಿ, ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಲು ಇದು ಸೂಕ್ತವಾದ ಪ್ರಕರಣವಾಗಿದೆ. ಆದ್ದರಿಂದ ಏಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಾರದು? ಪ್ರಕರಣದ 1, 2, 3 ಮತ್ತು 5ನೇ ಆರೋಪಿಗಳು ವಿಚಾರಣೆ ಎದುರಿಸಿದ್ದಾರೆಯೇ? ಮತ್ತು ಅವರು ಯಾವುದೇ ಕೋರ್ಟ್ನಿಂದ ಜಾಮೀನು ಪಡೆದಿದ್ದಾರೆಯೇ? ಎಂಬ ಬಗ್ಗೆ ಅರ್ಜಿಯ ಮುಂದಿನ ವಿಚಾರಣೆ ವೇಳೆ ವಿವರಣೆ ನೀಡಬೇಕು. ಇಲ್ಲದಿದ್ದರೆ, ತನಿಖೆಗೆ ಆದೇಶ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಸಿತು.