ಡಿ.ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್ ನಿರ್ಮಾಣದ ಹಾಗೂ “ಹರಿವು”, ” ನಾತಿಚರಾಮಿ”, “ಆಕ್ಟ್ 1978”, “19.20.21” ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕ ಮಂಸೋರೆ ನಿರ್ದೇಶಿಸುತ್ತಿರುವ ಮುಂದಿನ ಚಿತ್ರ “ದೂರ ತೀರ ಯಾನ”. ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಅನಾವರಣ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.ನನ್ನ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದೀರಾ. ಅದನ್ನು ಮೀರಿಸುವ ಪ್ರಯತ್ನ “ದೂರ ತೀರ ಯಾನ” ಎಂದು ಮಾತನಾಡಿದ ನಿರ್ದೇಶಕ ಮಂಸೋರೆ, ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ನಿರೀಕ್ಷೆಗಳು ಸಾಕಷ್ಟಿದೆ.
ಹೀಗೆ ನಾವು ಬದಲಾದ ಪರಿಸ್ಥಿತಿಗೆ ಹೊಂದುಕೊಂಡು, ಅವರಿಗೆ ಬೇಕಾದ ರೀತಿಯ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ ಈಗ ನಾನು ಮಾಡಲು ಹೊರಟಿರುವ ಸಿನಿಮಾ “ದೂರ ತೀರ ಯಾನ”. ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ.
ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ – ಹುಡುಗಿ ಹೊಸರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆಯೂ ಹೌದು. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್ ಸಿರೀಸ್ ಗಳಲ್ಲಿ ಹಾಗೂ ನನ್ನ ನಿರ್ದೇಶನದ ” ಆಕ್ಟ್ 1978″ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, “ರುದ್ರ ಗರುಡ ಪುರಾಣ” ಚಿತ್ರದ ಖ್ಯಾತಿಯ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಪಾತ್ರಗಳು ಇರುತ್ತದೆ. ಮುಂದೆ ಅದರ ಬಗ್ಗೆ ತಿಳಿಸುತ್ತೇನೆ.
“ದೂರ ತೀರ ಯಾನ” ದಲ್ಲಿ ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜಿಸುತ್ತಿರುವ ಆರು ಹಾಡುಗಳಿರುತ್ತದೆ. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನವಿರುವ ಈ ಚಿತ್ರಕ್ಕೆ ಚೇತನ ತೀರ್ಥಹಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭವಾಗಲಿದೆ. ಟೈಟಲ್ ಟೀಸರ್ ಗೆ ಡಾಲಿ ಧನಂಜಯ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು.