ಚಾಮರಾಜನಗರ: ಜೀವ, ಜೀವನ ಎರಡೂ ಅಮೂಲ್ಯವಾಗಿದ್ದು, ಆರೋಗ್ಯಕ್ಕೆ ಮಾರಕವಾಗಿರುವ ಮದ್ಯ ಮತ್ತು ಮಾದಕ ಪದಾರ್ಥಗಳನ್ನು ತ್ಯಜಿಸಲು ಪ್ರತಿಯೊಬ್ಬರು ದೃಢಸಂಕಲ್ಪ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಸಲಹೆ ಮಾಡಿದರು.ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿಯಲ್ಲಿಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳ ಕುರಿತು ಆಯೋಜಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುತೂಹಲದ ಮೋಜಿನ ಜೀವನ, ಜಿಗುಪ್ಸೆ, ಕೆಲಸದ ಒತ್ತಡದಿಂದ ಮುಕ್ತರಾಗಲು ಆರಂಭಿಸುವ ಮದ್ಯ, ಮಾದಕ ಪದಾರ್ಥಗಳ ಸೇವನೆ, ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಕೈಗೆ ಅಂಟಿಸಿಕೊಳ್ಳುವ ನಿಕೋಟಿನ್ ಪ್ಯಾಚ್ಗಳು ಆರೋಗ್ಯಕ್ಕೆಹಾನಿಕರ. ಮಾದಕ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಬಾಯಿ, ಯಕೃತ್, ಮೆದುಳು, ಶ್ವಾಸಕೋಶ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೂ ಕಾರಣವಾಗಿವೆ. ಇವೆಲ್ಲವೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಲಿವೆ. ಮದ್ಯ, ಮಾದಕ ಪದಾರ್ಥಗಳ ಸೇವನೆಯ ಅಭ್ಯಾಸವಿರುವವರು ಅವುಗಳಿಂದ ದೂರವಿರಲು ದೃಢ ಮನಸ್ಸು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿಶ್ವವಿದ್ಯಾ ಲಯದ ಕುಲಪತಿಗಳಾದ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ಮನುಕುಲಕ್ಕೆ ಮಾರಕವಾಗಿರುವ ಮದ್ಯ,ಮಾದಕ ವಸ್ತುಗಳ ದುಷ್ಪರಿಣಾಮಗಳು ವಿಶ್ವದೆಲ್ಲೆಡೆ ಸರ್ವೇಸಾಮಾನ್ಯವಾಗಿದೆ. ಇವುಗಳ ಸೇವನೆಯಿಂದ ಕುಟುಂಬ ಅರ್ಥಿಕ ಸಂಕಷ್ಟಕ್ಕೀಡಾಗಲಿದೆ. ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯರಾಗುತ್ತಿದ್ದಾರೆ. ಇದು ತಪ್ಪಬೇಕು. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಹೊರಬರಲು ಪ್ರತಿಯೊಬ್ಬರು ಗಟ್ಟಿಮನಸ್ಸು ಮಾಡಬೇಕು. ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞರಾದ ಡಾ. ಮೇರಿ ಅಂಜಲ ಹಾಗೂ ಮಹದೇಶ್ ಅವರು ಕಾರ್ಯಕ್ರಮದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ಆರ್. ಲೋಕನಾಥ್, ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಜಿ.ವಿ. ವೆಂಕಟರಮಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎ. ರಮೇಶ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.