ಚೆನ್ನೈ: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ಗೆ 177 ರನ್ ಗಳಿಸಿದ ನಂತರ ನಿರಂತರ ಮಳೆ ಸುರಿದ ಪರಿಣಾಮ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯ ರದ್ದುಗೊಂಡಿತು.
ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡವು 1-0 ಮುನ್ನಡೆ ಕಾಯ್ದುಕೊಂಡಿದೆ.ಮೊದಲ ಪಂದ್ಯದಲ್ಲಿ ಭಾರತ 12 ರನ್ಗಳಿಂದ ಪರಾಭವಗೊಂಡಿತ್ತು. ಹೀಗಾಗಿ, ತವರಿನಲ್ಲಿ ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಹರ್ಮನ್ಪ್ರೀತ್ ಕೌರ್ ಬಳಗವು ಮಂಗಳವಾರ (ಜುಲೈ 9) ಇಲ್ಲಿ ನಡೆಯುವ ಅಂತಿಮ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಎಂ.ಎ. ಚಿದಂಬರಂ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾದ ಇನಿಂಗ್ಸ್ ವೇಳೆಯೂ ಮೂರು ಬಾರಿ ಮಳೆ ಅಡಚಣೆ ಉಂಟುಮಾಡಿತು. ಇನಿಂಗ್ಸ್ ವಿರಾಮ ವೇಳೆ ಮತ್ತೆ ಮಳೆ ಆರಂಭವಾಯಿತು. ಸಾಕಷ್ಟು ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಅಂಪೈರ್ಗಳು ಪಂದ್ಯ ರದ್ದು ಮಾಡುವ ನಿರ್ಧಾರ ಪ್ರಕಟಿಸಿದರು.