ಬೆಂಗಳೂರು: 2024ರ ಅಂತ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಬೆಳ್ಳಂದೂರು ಕೆರೆ ಪುನಶ್ಚೇತನ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.
ಡಿಸೆಂಬರ್ 2024 ರೊಳಗೆ ಬೆಳ್ಳಂದೂರು ಕೆರೆಯ ಪುನಶ್ಚೇತನ ಪೂರ್ಣಗೊಳ್ಳಬೇಕಿತ್ತು. ಆದರೆ. ಕೆರೆಯ 900 ಎಕರೆ ಪ್ರದೇಶದಲ್ಲಿ ಇನ್ನೂ ಟನ್ಗಟ್ಟಲೆ ಹೂಳು ಬಾಕಿ ಉಳಿದಿದ್ದು, ನಿಗದಿತ ಸಮಯದಲ್ಲಿ ಕೆಲಸ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
2018 ರಲ್ಲಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಎಸ್ಕ್ರೊ ಖಾತೆಯಲ್ಲಿ ರೂ 500 ಕೋಟಿಗಳನ್ನು ಇರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಹಣದಲ್ಲಿ ಬೆಳ್ಳಂದೂರು ಮತ್ತು ವರ್ತೂರು ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ದೇಶಿಸಿತ್ತು. ಆದರೆ, ರಾಜ್ಯ ಸರ್ಕಾರ ಮತ್ತು ಬಿಡಿಎ ಯೋಜನೆ ಪೂರ್ಣಗೊಳಿಸುವಲ್ಲಿ ವಿಫಲವಾಗಿವೆ.
ಅಂದಾಜು 32.33 ಲಕ್ಷ ಕ್ಯೂಬಿಕ್ ಮೀಟರ್ ಹೂಳು ಪೈಕಿ 22.69 ಲಕ್ಷ ಕ್ಯೂಬಿಕ್ ಮೀಟರ್ (ಶೇ.70) ಹೂಳು ತೆಗೆಯಲಾಗಿದ್ದು, ಇನ್ನೂ ಶೇ. 30ರಷ್ಟು ಕಾರ್ಯ ಬಾಕಿ ಇದೆ. ಅಧಿಕಾರಿಗಳು ತ್ವರಿತ ಕಾಮಗಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆಂದು ಕೆರೆ ಕಾರ್ಯಕರ್ತರು ಮತ್ತು ಸಂರಕ್ಷಣಾವಾದಿಗಳು ಹೇಳಿದ್ದಾರೆ.
ಈ ಹಿಂದೆ ಕಾಮಗಾರಿ ವಿಳಂಬಕ್ಕೆ ಮಳೆ ಕಾರಣವೆಂದು ಬಿಡಿಎ ಅಧಿಕಾರಿಗಳು ಹೇಳಿದ್ದರು. ಬಳಿಕ ಶೇ.70ರಷ್ಟು ಪ್ರದೇಶದಲ್ಲಿ ನೀರಿಂಗಿಸುವ ಕಾರ್ಯ ನಡೆಸಲಾಗಿತ್ತು. ಅದಾದರೂ ಕಾಮಗಾರಿ ವಿಳಂಬವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಗೆ ಹಣದ ಕೊರತೆಯನ್ನು ಮುಂದಿಟ್ಟಿದ್ದೇ ಆದರೆ, ಇಲ್ಲಿಯವರೆಗೆ ಖರ್ಚು ಮಾಡಿದ 100 ಕೋಟಿ ವ್ಯರ್ಥವಾಗುತ್ತದೆ ಎಂದು ಸಿಟಿಜನ್ ಚೇಂಜ್ ಮೇಕರ್ – ಬೆಳ್ಳಂದೂರು’ನ ಸೋನಾಲಿ ಸಿಂಗ್ ಅವರು ಹೇಳಿದ್ದಾರ.
ಈತನ್ಮಧ್ಯೆ ರಾಜ್ಯ ಸರ್ಕಾರ ಎಸ್ಕ್ರೊ ನಿಧಿಯನ್ನು ಈಗಾಗಲೇ ಬಳಸಲಾಗಿದೆ ಎಂದು ಹೇಳಿದೆ, 250 ಕೋಟಿ ರೂ. ಕೆರೆ ಬಳಿಯ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ, ಬೆಳ್ಳಂದೂರು ಕೆರೆ ವರ್ತೂರು ಕೆರೆಯಲ್ಲಿ ಹೂಳು ತೆಗೆಯಲು 100 ಕೋಟಿ ರೂ ಖರ್ಚು ಮಾಡಲಾಗಿದೆ. ಉಳಿದ ಮೊತ್ತವನ್ನು ಮೈಲಸಂದ್ರ ಮತ್ತು ವಿಠಲಸಂದ್ರದಲ್ಲಿ ಹೂಳು ತುಂಬಿದ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಖರ್ಚು ಮಾಡಲಾಗಿದೆ ಎಂದು ಹೇಳಿದೆ.
12 ಮೌಲ್ಯದ ಕಾಮಗಾರಿಗೆ ಇನ್ನೂ ಪಾವತಿ ಮಾಡಿಲ್ಲ. ಹೀಗಾಗಿ ಕಾಮಗಾರಿ ಕೆಲಸ ಸ್ಥಗಿತಗೊಂಡಿದೆ. ಬಿಬಿಎಂಪಿ ಮಾರ್ಷಲ್ಗಳ ವೇತನ ಕೂಡ ಬಾಕಿ ಉಳಿದಿದ್ದು, ಕೆರೆಗಳ ಸಂರಕ್ಷಣೆ ಮಾಡುವ ಕಾರ್ಯ ಕೂಡ ದುರ್ಬಲಗೊಳ್ಳುತ್ತಿದೆ ಎಂದು ಬೆಳ್ಳಂದೂರು-ವರ್ತೂರು ಕೆರೆಗಳ ಅಭಿವೃದ್ಧಿ ಸಮಿತಿಯ ಸಮಾಜ ಸೇವಕ ಜಗದೀಶ್ ರೆಡ್ಡಿ ಅವರು ಹೇಳಿದ್ದಾರೆ.