ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಎಂಎಲ್ಸಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಬಟ್ಟೆ ಮಾತ್ರ ಪರಿಶುದ್ಧವಾಗಿದ್ದರೆ ಸಾಕಾ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರವಿ, ಭೂಮಿ ವಶಪಡಿಸಿಕೊಳ್ಳಬೆಕಾದರೆ 50:50 ನಿವೇಶನ ಕೊಡಬೇಕಾಗುತ್ತದೆ. ಸರ್ಕಾರಕ್ಕೆ ಮೋಸ ಮಾಡಬೇಕೆಂದೇ ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದು ಟೀಕಿಸಿದರು.ಮೋಸ ಮಾಡಿರುವವರು ಸಿಎಂ ಸಿದ್ದರಾಮಯ್ಯಗೆ ಹತ್ತಿರವಾಗಿರುವವರು. ಅದಕ್ಕೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಸಿಎಂ ತವರು ಜಿಲ್ಲೆಯಲ್ಲಿಯೇ ಸಾವಿರಾರು ಕೋಟಿ ಅಕ್ರಮ ಆಗಿದೆ. ಸಿಎಂ ಸಿದ್ದರಾಮಯ್ಯ ನವರು ತಮ್ಮ ಪರಿಶುದ್ಧತೆಯನ್ನು ಸಾಬೀತುಪಡಿಸಲು ರಾಜೀನಾಮೆ ಕೊಡಬೇಕು ಎಂದ ಸಿಟಿ ರವಿ, ದಾಖಲೆ ಇಟ್ಟು ಭ್ರಷ್ಟಾಚಾರ ಜನರ ಮುಂದೆ ಬಯಲಿಗೆಳೆಯುತ್ತೇವೆ ಎಂದರು.ಭ್ರಷ್ಟಾಚಾರ ಯಾರ ಅವಧಿಯಲ್ಲಿ ಆಗಿದ್ದರೂ ಕ್ರಮ ಕೈಗೊಳ್ಳಿ. ಬಿಜೆಪಿ ಕಾಲದಲ್ಲಿ ಅಕ್ರಮ ಆಗಿದ್ದರೂ ಕ್ರಮ ತೆಗೆದುಕೊಳ್ಳಿ ಎಂದು ರವಿ ಆಗ್ರಹಿಸಿದರು.