ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಬಿಜೆಪಿ ಪಕ್ಷಗಳ ವತಿಯಿಂದ ಇಂದು ಮೈಸೂರು ಚಲೋ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಹಾಗೂ ಕೇಂದ್ರ ಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.
ಹೆಚ್ಡಿಕೆ ಮಾತನಾಡಿ, ಇದು ಜನವಿರೋಧಿ ಸರ್ಕಾರವಾಗಿದ್ದು ಮುಡಾ, ವಾಲ್ಮೀಕಿ ಪ್ರಕರಣ ಬಯಲಿಗೆ ಬಂದಿದೆ. ಜನರ ಆಸ್ತಿಗಳನ್ನು ನುಂಗಿದ ಸರ್ಕಾರದ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ ಎಂದು ತಿಳಿಸಿದರು.ದೇವೇಗೌಡರ ಕುಟುಂಬದಿಂದ ನೈಸ್ ಸುತ್ತಮುತ್ತ ಅಕ್ರಮ ಆಸ್ತಿ ಎಂಬ ಡಿಕೆ ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಅವರ ಕೈಯಲ್ಲೇ ಇದೆ.
ನಾವು ಅಕ್ರಮವಾಗಿ ಆಸ್ತಿ ಮಾಡಿದರೆ ಸರ್ಕಾರ ವಶಪಡಿಸಿಕೊಳ್ಳಲಿ. ಸರ್ಕಾರ ಅವರದ್ದೇ ಇದೆ, ಮುಟ್ಟುಗೋಲು ಹಾಕಿಕೊಳ್ಳಲಿ. ನಾವು ನ್ಯಾಯ ಬದ್ಧವಾಗಿ ಬದುಕಿದ್ದೇವೆ, ಇವರ ಥರ ಬದುಕಿಲ್ಲ. ಶಿವಕುಮಾರ್ ಬಿಡದಿಯಲ್ಲಿ ಆರೋಪ ಮಾಡಿದ್ದಾರೆ. ಅವರಿಗೆ ನಾನು ಬಿಡದಿಯಲ್ಲೇ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.
ಮುಡಾ ಹಗರಣದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ.ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ.
ಪ್ರತಿಯೊಂದು ಕಡೆ 8 ರಿಂದ 10 ಸಾವಿರ ಜನ ಸೇರುತ್ತಾರೆಂಬ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆ ಅವಕಾಶ. ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ಅವರಾಗಿಯೇ ಕೊಟ್ಟರೆ ಅವರಿಗೆ ಅದು ಶೋಭೆ ತರುತ್ತದೆ, ಪಕ್ಷಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯಪಾಲರೇ ಕ್ರಮ ತೆಗೆದುಕೊಳ್ಳಬಹುದು. ಇದಕ್ಕೆ ಅವಕಾಶ ಕೊಡದೇ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಸಲಹೆ ಕೊಡುತ್ತೇನೆ ಎಂದರು.
ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಗತ್ತಿಗೆ ವಾಸ್ತವ ಸ್ಥಿತಿ ತಿಳಿದಿದೆ.
ಹೀಗಾಗಿ ಅವರು ಯಾವುದೇ ಆರೋಪಗಳಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ರಾಜ್ಯಪಾಲ ಕಚೇರಿ ದುರ್ಬಳಕೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ವಾಸ್ತವಿಕ ಸತ್ಯ ಸಂಗತಿ ದೇಶದ ಜನರಿಗೆ ಗೊತ್ತಿದೆ. ಈ ರೀತಿಯ ಆರೋಪ ಮಾಡುವುದರಿಂದ ಅವರು ಆರೋಪದಿಂದ ಮುಕ್ತ ಆಗಲು ಆಗುವುದಿಲ್ಲ. ಈ ರೀತಿಯ ಮಾತುಗಳಿಂದ ಅವರು ಬಚಾವ್ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದಿನಿಂದ ಆಗಸ್ಟ್ 10 ರವರೆಗೆ ಏಳು ದಿನಗಳ ಕಾಲ ಒಟ್ಟು 124 ಕಿಮೀವರೆಗೆ ಪಾದಯಾತ್ರೆ ನಡೆದು ಮುಡಾ ಕಚೇರಿ ಬಳಿ ಕೊನೆಯಾಗಲಿದೆ. ಕೊನೆಯ ದಿನದಂದು ಮೈಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ಸಾಧ್ಯತೆಯಿದೆ.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾಕರಂದ್ಲಾಜೆ, ವಿಧಾನಮಂಡಲದ ಉಭಯ ಸದನಗಳ ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ, ಬಿ.ವೈ. ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಮುಖ್ಯಸ್ಥ ಜಿ.ಟಿ.ದೇವೇಗೌಡ, ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶ್ಯಂಪೂರ್, ಎಚ್.ವಿಶ್ವನಾಥ್, ಸಂಸದರಾದ ವಿಶ್ವೇಶ್ವರಹೆಗಡೆ ಕಾಗೇರಿ, ಗೋವಿಂದಕಾರಜೋಳ, ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ, ಜನಾರ್ಧನರೆಡ್ಡಿ, ಟಿ.ಎ. ಶರವಣ, ಡಾ.ಸಿ.ಎನ್. ಅಶ್ವತ್ಥ್ನಾರಾಯಣ ಮತ್ತಿತರ ಮುಖಂಡರು ಹಾಜರಿದ್ದರು.