ಕುಣಿಗಲ್: ನಾಟಕ, ರಂಗಭೂಮಿಯಲ್ಲಿಯೇ ನಿಜವಾದ ಜೀವಂತ ಕಲೆ ಅಡಗಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದು ಕಲಾವಿಧರ ಕ್ಷೇಮಾಭಿವೃದ್ದಿ ಸಂಘದ ರಾಜಾಧ್ಯಕ್ಷ ಮಾಯಣ್ಣಗೌಡ ತಿಳಿಸಿದ್ದಾರೆ.ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ತಾಲೂಕು ಕಲಾವಿಧರ ಕ್ಷೇಮಾಭಿವೃದ್ದಿ ಸಂಘದ 18 ನೆ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಹಗಲು ಪೌರಾಣಿಕ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಚಲನಚಿತ್ರದಲ್ಲಿ ದೃಷ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷವಾದಲ್ಲಿ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ ಆದರೆ ರಂಗಭೂಮಿ ಪ್ರದರ್ಶನದಲ್ಲಿ ತಿದ್ದುಪಡಿಗೆ ಮತ್ತು ತಿರುಚಲು ಯಾವುದೇ ಅವಕಾಶವಿರುವುದಿಲ್ಲ, ರಂಗಭೂಮಿಯಲ್ಲಿ ನಟನೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ ಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಹುದ್ದಾಗಿದೆ ಎಂದರು ಈ ಭಾರಿ ಪೊಲೀಸ್ ಸಿಬ್ಬಂದಿಗಳು ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ತಮ್ಮ ಜೀವನದ ಜಂಜಾಟದಿಂದ ಹೊರ ಬರಲು ನಾಟಕ ಅಭಿನಯವು ಉತ್ತಮ ಅವಕಾಶ ಕಲ್ಪಿಸುತ್ತಿದೆ ಎಂದರು.
ಕಲಾ ಭವನ ಅವಶ್ಯಕ : ತಾಲೂಕಿನಲ್ಲಿ ಹತ್ತಾರು ಮಂದಿ ಉತ್ತಮ ಕಲಾವಿಧರಿದ್ದಾರೆ ಹಾಗೂ ನವ ಕಲಾವಿಧರು ಇರುವರು ಅವರಿಗೆ ಉತ್ತಮ ತರಬೇತಿ ನೀಡಲು ಮತ್ತು ಸಂಘದ ಚಟುವಟಿಕೆಗಳಿಗಾಗಿ ಕಲಾಭವನ ಅತ್ಯ ಅವಶ್ಯಕವಿರುತ್ತದೆ, ಈ ಬಗ್ಗೆ ಶಾಸಕರಾದ ಡಾ.ಹೆಚ್.ಡಿ.ರಂಗನಾಥ್ ಅವರಿಗೆ ಮನವಿ ಸಲ್ಲಿಸಿ ನಿವೇಶನ ಮಂಜೂರು ಮಾಡಿಸಿ ಸರ್ಕಾರದ ಅನುದಾನ ಮತ್ತು ದಾನಿಗಳಿಂದ ದೇಣಿಗೆ ಪಡೆದು ಉತ್ತಮ ಕಲಾಭವನ ನಿರ್ಮಿಸುವಂತೆ ಸಂಘದ ಕಲಾವಿಧರಿಗೆ ಸೂಚಿಸಿದರು,
ಬೆಸ್ಕಾಂ ಇಇ ಪುರುಷೋತ್ತಮ್ ಮಾತನಾಡಿ ರಂಗಭೂಮಿಯು ಮಾನವನಲ್ಲಿ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮತ್ತು ಮಾನವೀಯತೆಯನ್ನು ಬೆಳೆಸುವಲ್ಲಿ ಅದು ಸಹಕಾರಿಯಾಗಿದೆ ರಂಗಭೂಮಿ ಕಲೆಯನ್ನು ಕಲಾವಿಧರು ಹಾಗೂ ಕಲಾಸಕ್ತರು ಹೆಚ್ಚೆಚ್ಚು ಪ್ರೋತ್ಸಾಹಿಸುವ ಮೂಲಕ ಅದನ್ನು ಉಳಿಸಿ ಬೆಳೆಸಬೇಕೆಂದರು, ಕರ್ನಾಟಕ ವಿವಿಧ ಭಾಗಗಳಲ್ಲಿ ವಿವಿಧ ಕಲೆಗಳು ಇದೆ, ಪೌರಾಣಿಕ ನಾಟಕ, ಐತಿಹಾಸಿಕ ನಾಟಕ, ಸಾಮಾಜಿಕ ನಾಟಕ, ಜಾನಪದ ಗೀತೆ, ಲಾವಣಿ, ಗೀಗಿ ಪದ, ಸುಗ್ಗಿಯ ಹಾಡು, ಸೋಭಾನೆ ಪದ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಕರಡಿ ಮೇಳ ಸೇರಿದಂತೆ ಆನೇಕ ಕಲೆಗಳಿವೆ ಇದು ರಾಜ್ಯಕ್ಕೆ ಮೆರಗು ನೀಡುವಂತ ಕಲೆಯಾಗಿದೆ, ನಮ್ಮ ಪೂರ್ವಿಕರು ಬಳುವಳಿಯಾಗಿ ಕೊಟ್ಟಿದ್ದಾರೆ ಅದನ್ನು ಇಂದಿನ ಪೀಳಿಗೆಗೆ ಪರಿಚಯಿಸುವಂತ ಕೆಲಸ ಆಗಬೇಕಾಗಿದೆ ಎಂದು ಹೇಳಿದರು,
ಅಧ್ಯಕ್ಷತೆವಹಿಸಿದ ಮಾತನಾಡಿದ ತಾಲೂಕು ಕಲಾವಿಧ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದರಾಮೇಗೌಡ ಹಳಿವಿನ ಹಂಚಿನಲ್ಲಿ ಇರುವ ರಂಗಭೂಮಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಸಂಘವು ಹತ್ತಾರು ಕಲಾವಿಧರಿಗೆ ತರಬೇತಿ ನೀಡಿ ಕಳೆದ 18 ವರ್ಷಗಳಿಂದ ನೂರಾರು ಪೌರಾಣಿಕ ನಾಟಕಗಳನ್ನು ಪ್ರದರ್ಶನ ನೀಡಿದೆ ರಂಗಭೂಮಿಯಲ್ಲಿ ಅತ್ಯುತ್ತಮ ಸಾಧನೆಗೈದ ಕಲಾವಿಧರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ ಈ ಭಾರಿ ಕುರುಕ್ಷೇತ್ರ, ಸತ್ಯ ಹರಿಶ್ಚಂದ್ರ, ಸತ್ಯವ್ರತ, ಸಂಪೂರ್ಣ ರಾಮಾಯಣ ಸೇರಿದಂತೆ 13 ನಾಟಕಗಳನ್ನು 13 ದಿನಗಳ ಕಾಲ ಹಗಲಿನಲ್ಲಿ ಅನುಭವಿ ಕಲಾವಿಧರಿಂದ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ತಾ.ಪಂ ಮಾಜಿ ಅಧ್ಯಕ್ಷ ಹರೀಶ್ನಾಯ್ಕ್, ಕಲಾವಿಧರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ್ಲಿಂಗೇಗೌಡ, ಖಜಾಂಚಿ ತಿಮ್ಮಪ್ಪ, ಪತ್ರಿಕಾ ಸಲಹೆಗಾರ ಕಲಾವಿಧ ಕೆ.ಎ.ರವೀಂದ್ರಕುಮಾರ್, ಮುಖಂಡರಾದ ಐ.ಕೆ.ಸಿದ್ದಗಂಗಯ್ಯ, ಎಸ್.ಎಲ್.ವಿ ಮಹೇಶ್ ಮತ್ತಿತರರು ಇದ್ದರು.