ಎರಡು ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಆಸ್ಟ್ರಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಮಾರ್ಗಗಳನ್ನು ಮತ್ತು ಅನೇಕ ಭೌಗೋಳಿಕ ರಾಜಕೀಯ ಸವಾಲುಗಳ ಕುರಿತು ನಿಕಟ ಸಹಕಾರವನ್ನು ಕೋರಲಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೋದಿ, “ವಿಯೆನ್ನಾಕ್ಕೆ ಬಂದಿಳಿದಿದೆ. ಆಸ್ಟ್ರಿಯಾದ ಈ ಭೇಟಿ ಒಂದು ವಿಶೇಷವಾಗಿದೆ. ನಮ್ಮ ರಾಷ್ಟ್ರಗಳು ಪರಸ್ಪರ ಬದ್ಧತೆ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ಚಾನ್ಸೆಲರ್ ಅವರೊಂದಿಗಿನ ಮಾತುಕತೆಗಳು, ಭಾರತೀಯ ಸಮುದಾಯದೊಂದಿಗೆ ಸಂವಾದಗಳು ಸೇರಿದಂತೆ ಆಸ್ಟ್ರಿಯಾದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಮೋದಿ ಅವರನ್ನು ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಇದು 40 ವರ್ಷಗಳ ನಂತರ ಆಸ್ಟ್ರಿಯಾಕ್ಕೆ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ, 1983 ರಲ್ಲಿ ಇಂದಿರಾ ಗಾಂಧಿಯವರು ಕೊನೆಯ ಬಾರಿಗೆ ಭೇಟಿ ನೀಡಿದ್ದರು. ಆ ಬಳಿಕ ಭಾರತದ ಪ್ರಧಾನಿ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಇದೀಗ 40 ವರ್ಷಗಳ ಬಳಿಕ ಮೋದಿ ಭೇಟಿ ನೀಡುತ್ತಿದ್ದು ಇದು ವಿಶೇಷ ಭೇಟಿಯಾಗಿರಲಿದೆ.
ಎಕ್ಸ್ ಫೋಸ್ಟ್ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು, “ಉಭಯ ದೇಶಗಳು ಈ ವರ್ಷ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದರಿಂದ, ಈ ಮಹತ್ವದ ಭೇಟಿಯು ಭಾರತ-ಆಸ್ಟ್ರಿಯಾ ಬಾಂಧವ್ಯಕ್ಕೆ ಹೊಸ ವೇಗ ನೀಡುತ್ತದೆ ಎಂದಿದ್ದಾರೆ.
ಮೋದಿ ಅವರು ಆಸ್ಟ್ರಿಯಾ ಗಣರಾಜ್ಯದ ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರನ್ನು ಭೇಟಿ ಮಾಡಲಿದ್ದು, ಆಸ್ಟ್ರಿಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.ಆಸ್ಟ್ರಿಯಾಕ್ಕೆ ಭೇಟಿ ನೀಡುವ ಮೊದಲು, ಮೋದಿ ಅವರು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಯ ಹಂಚಿಕೆಯ ಮೌಲ್ಯಗಳು ಉಭಯ ದೇಶಗಳು ಸದಾ ನಿಕಟ ಪಾಲುದಾರಿಕೆಯನ್ನು ನಿರ್ಮಿಸುವ ತಳಹದಿಯನ್ನು ರೂಪಿಸುತ್ತವೆ ಎಂದಿದ್ದರು.