ಬೆಂಗಳೂರು: ನಿಗಮದ ಅಕ್ರಮದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳು ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತಾರೆ. ಮಾಹಿತಿಗಳ ಆಧಾರದ ಮೇಲೆ ಬಿ.ನಾಗೇಂದ್ರರನ್ನು ಬಂಧಿಸಿದ್ದಾರೆ. ರಾಜಕೀಯವಾಗಿ ಇದನ್ನ ಉಪಯೋಗಿಸಬಾರದು ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ತನಿಖಾ ಸಂಸ್ಥೆಗಳು ರಾಜಕೀಯ ಅಸ್ತ್ರಗಳಾಗಬಾರದು. ತನಿಖೆಗೆ ನಮ್ಮದೇನು ತಕರಾರು ಇಲ್ಲ ಎಂದರು.ನಾವೂ ಸಹ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದ್ದೇವೆ. ನಾಗೇಂದ್ರ, ದದ್ದಲ್ರನ್ನು ಕರೆದು ಎಸ್ಐಟಿ ವಿಚಾರಣೆ ನಡೆಸಿದ್ದಾರೆ. ಸಿಬಿಐ, ಇಡಿ ರಾಜಕೀಯ ಪಕ್ಷಗಳ ರೀತಿ ಕೆಲಸ ಮಾಡಬಾರದು. ದದ್ದಲ್ ಎಲ್ಲೂ ಹೋಗಿಲ್ಲ, ಇಲ್ಲೇ ಓಡಾಡಿಕೊಂಡು ಇದ್ದಾರೆ ಎಂದರು.
ಇ.ಡಿ ಅಧಿಕಾರಿಗಳು ತಮಗಿರುವ ಮಾಹಿತಿ ಪ್ರಕಾರ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಅದು ಕಾನೂನು ಪ್ರಕ್ರಿಯೆ. ವಶಕ್ಕೆ ಪಡೆದಿರುವುದಕ್ಕೆ ತಮ್ಮ ಅಭ್ಯಂತರವೇನೂ ಇಲ್ಲ, ಆದರೆ ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಕಾಂಗ್ರೆಸ್ ಮೊದಲಿಂದಲೂ ವಿರೋಧಿಸುತ್ತದೆ.
ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣವನ್ನು ಸರ್ಕಾರ ರಚಿಸಿರುವ ಎಸ್ಐಟಿ ತನಿಖೆ ನಡೆಸುತ್ತಿದೆ ಮತ್ತು ಅದಕ್ಕೆ ಸಂಬಂಧಿಸಿದ ಬ್ಯಾಂಕ್ ವ್ಯವಹಾರಗಳನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈಡಿ ಮಧ್ಯೆ ಪ್ರವೇಶಿಸುವ ಅಗತ್ಯವಿಲ್ಲರಲಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.