ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಅತಿಥ್ಯ ದೊರೆತ ಪ್ರಕರಣದ ತನಿಖೆಯು ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ಗೆ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿರುವಾಗ ವಿಶೇಷ ಅತಿಥ್ಯದ ಫೋಟೋಗಳು ವೈರಲ್ ಆಗಿತ್ತು. ಆದಾದ ಬಳಿಕ ದರ್ಶನ್ ವಿರುದ್ಧ ಎರಡು ಎಫ್ಐಆರ್ ಹಾಗೂ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ಒಂದು ಕೇಸ್ ದಾಖಲಾಗಿತ್ತು. ಈ ಮೂರು ಪ್ರಕರಣಗಳನ್ನು ತನಿಖೆ ನಡೆಸಿದ್ದ ಮೂವರು ಅಧಿಕಾರಿಗಳು ವಿಸ್ತೃತ ತನಿಖೆಯನ್ನು ಎಲ್ಲಾ ಅಯಾಮಗಳಲ್ಲಿ ಕೈಗೊಂಡು ಪೂರ್ಣಗೊಳಿಸಿದ್ದಾರೆ.
ಹುಳಿಮಾವು ಇನ್ಸ್ಪೆಕ್ಟರ್, ನಟ ದರ್ಶನ್ಗೆ ಸಿಗರೇಟ್, ಟೀ, ಚೇರ್ ಕೊಟ್ಟಿದ್ಯಾರು ಎಂಬುದರ ಬಗ್ಗೆ ತನಿಖೆ ಮಾಡಿದ್ದಾರೆ. ದರ್ಶನ್ಗೆ ಚೇರ್,
ಟೀ, ಸಿಗರೇಟ್ ಅಧಿಕಾರಿಗಳೇ ವಿಲ್ಸನ್ ಗಾರ್ಡನ್ ನಾಗನ ಮೂಲಕ ಸರಬರಾಜು ಮಾಡಿಸಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೂ ಬೇಗೂರು ಇನ್ಸ್ಪೆಕ್ಟರ್, ರೌಡಿಶೀಟರ್ ಮಗ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದಾಗ ಆರೋಪಿ ದರ್ಶನ್ ಮಾತನಾಡಿರುವ ಬಗ್ಗೆ ತನಿಖೆ ಮಾಡಿ ಮುಗಿಸಿದ್ದಾರೆ.
ಆರೋಪಿ ವಿಡಿಯೋ ಕಾಲ್ಗೆ ಬಳಸಿರುವ ಮೊಬೈಲ್ ಅಕ್ರಮವಾಗಿ ಅಧಿಕಾರಿಗಳ ಮೂಲಕ ಪಡೆದುಕೊಂಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.ಮೂರನೇ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಎಸಿಪಿ ತನಿಖೆ ಮಾಡಿದ್ದರು. ತನಿಖೆಯಲ್ಲಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಕೈದಿಗಳನ್ನೇ ಬಳಸಿಕೊಂಡು ಕೆಲಸ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.