ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ರಾಜ್ಯದ 2025 26ನೇ ಸಾಲಿನ ಮುಂಗಡಪತ್ರವನ್ನು ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಎಲ್ಲಾ ಸಮಾಜದ ಸಂಘಟನೆಗಳ ಪ್ರತಿನಿಧಿಗಳ ಸಮಲೋಚನಾ ಸಭೆಯನ್ನು ದಿನಾಂಕ 18-2-2025 ನೇ ಮಂಗಳವಾರದಂದು ವಿಧಾನಸೌಧದ 334ನೇ ನಂಬರ್ ಕೊಠಡಿ ಸಭಾಂಗಣದಲ್ಲಿ ನಡೆಸಲಾಯಿತು.
ಸಮಾಲೋಚನಾ ಸಭೆಯಲ್ಲಿ ರಾಜ್ಯದ ವಿಶ್ವಕರ್ಮ ಸಮಾಜದ ಪರವಾಗಿ ವಿಶ್ವಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷರಾದ ವಿಜಯಕುಮಾರ್ ಪತ್ತಾರ್, ರಾಜ್ಯ ಪ್ರಧಾನ ಸಂಚಾಲಕರಾದ ಈಶ್ವರ್ ವಿಶ್ವಕರ್ಮ ಹೊಸಕೋಟೆ, ಇವರುಗಳು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಬೇಡಿಕೆಗಳ ಬಗ್ಗೆ ಈಶ್ವರ್ ವಿಶ್ವಕರ್ಮ ಹೊಸಕೋಟೆ ಇವರು ಸಭೆಯಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಮಾನ್ಯ ಸಿದ್ದರಾಮಯ್ಯನವರಿಗೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅತ್ಯವಶ್ಯಕತೆಯಾಗಿ ಬೇಕಾಗಿರುವ ಕಾರ್ಯಕ್ರಮಗಳು ಮತ್ತು ಬಜೆಟ್ ನಲ್ಲಿ ಬೇಕಾಗಿರುವ ಯೋಜನೆಗಳ ಬಗ್ಗೆ ವಿವರವಾಗಿ ತಿಳಿಸಿರುತ್ತಾರೆ. ಅವುಗಳೆಂದರೆ:
ವಿಶ್ವಕರ್ಮ ಸಮಾಜ ಶೈಕ್ಷಣಿಕವಾಗಿ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಹೊಂದಬೇಕೆಂದರೆ 2-ಎ ನಲ್ಲಿ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಭಾರತೀಯ ಸಂಸ್ಕೃತಿಗೆ ಜೀವ ತುಂಬಿರುವ ವಿಶ್ವಕರ್ಮ ಸಮಾಜದ ಪಂಚ ವೃತ್ತಿಗಳ ಉಳಿವಿಗೆ ಮತ್ತು ಅಭಿವೃದ್ಧಿಗೆ ವಿಶ್ವಕರ್ಮ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಈ ಬಜೆಟ್ ನಲ್ಲಿ ಇದಕ್ಕೆ ಅನುದಾನ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗುತ್ತಿರುವ ಚಿನ್ನ ಬೆಳ್ಳಿ ರೆಡಿಮೇಡ್ ಆಭರಣಗಳ ಮೇಲೆ ಕೇಂದ್ರ ಸರ್ಕಾರ 18% ಜಿ ಎಸ್ ಟಿ, 1% ಸೆಸ್ ವಸೂಲಿ ಮಾಡುತ್ತಿದೆ. ರಾಜ್ಯದಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. 1% ಸೆಸ್ ಹಣವನ್ನು ಈ ಮಂಡಳಿಗೆ ಪಡೆದು ಕಟ್ಟಡ ಕಾರ್ಮಿಕರ ಮಂಡಳಿಯಿಂದ ಯಾವ ರೀತಿ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆಯೋ ಅದೇ ರೀತಿಯಲ್ಲಿ ಚಿನ್ನ ಬೆಳ್ಳಿ ಕೆಲಸಗಾರರಿಗೆ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳ ಕಮಿಟಿಗಳಲ್ಲಿ ಇಬ್ಬರು ವಿಶ್ವಕರ್ಮರಿಗೆ ಮೀಸಲಾತಿ ನೀಡುವ ಮತ್ತು ರಾಜ್ಯಮಟ್ಟದಲ್ಲಿ ಮುಜರಾಯಿ ದೇವಸ್ಥಾನಗಳ ಉಸ್ತುವಾರಿ ಸಮಿತಿ ರಚಿಸಿರುವ ವಿಧೇಯಕ ಎರಡು ಬಾರಿ ರಾಜ್ಯಪಾಲರಿಂದ ಸಹಿ ಆಗದೆ ವಾಪಸ್ಸು ಬಂದಿದೆ ಕಾರಣ ಈ ವಿಧೇಯಕದಲ್ಲಿ ಬೇರೆ ವಿಷಯಗಳು ಇರುವುದರಿಂದ ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ. ಆದ್ದರಿಂದ ಪ್ರತ್ಯೇಕವಾಗಿ ವಿಶ್ವಕರ್ಮರಿಗೆ ಸಂಬಂಧಪಟ್ಟ ವಿಧೇಯಕವನ್ನು ಈ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಬೇಕೆಂದು ಮನವಿ ಮಾಡಲಾಗಿರುತ್ತದೆ.
ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಗಳನ್ನು ನೀಡಬೇಕು. ಬಿ.ಇ ಮತ್ತು ಮೆಡಿಕಲ್ ಗೆ ಪ್ರವೇಶ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಪ್ರಾರಂಭಿಕವಾಗಿ ಪ್ರವೇಶಕ್ಕೆ ಶುಲ್ಕ ಕಟ್ಟಲು ಧನ ಸಹಾಯ ಮಾಡಬೇಕು. ಮತ್ತು ಪಂಚ ವೃತ್ತಿಗಳನ್ನು ಜೀವನಾಧಾರ ಮಾಡಿಕೊಂಡಿರುವವರಿಗೆ ಸಾಲ, ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಲಾಗಿರುತ್ತದೆ.
ಈ ಸಭೆಯಲ್ಲಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರುಗಳು ಮಾಜಿ ಎಂ.ಎಲ್.ಸಿಗಳು ಬೇರೆ ಬೇರೆ ಸಂಘಟನೆಗಳ ಅಧ್ಯಕ್ಷರುಗಳು, ಈಗಾಗಲೇ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಸ್ಥಾನಕ್ಕೆ 160ಕ್ಕೂ ಹೆಚ್ಚು ಜನ ಶಿಫಾರಸ್ಸು ಪತ್ರಗಳನ್ನು ನೀಡಿದ್ದು, ಕೆಲವರು ಈಗಾಗಲೇ ಜಿಲ್ಲಾ ಪ್ರತಿನಿಧಿಗಳಾಗಿ ನೇಮಕಗೊಂಡಿದ್ದು, ಇವರು ಯಾರು ಈ ಸಭೆಯಲ್ಲಿ ಭಾಗವಹಿಸಿಲ್ಲ. ಇದು ದುರಾದೃಷ್ಟ ಸಂಗತಿಯಾಗಿದೆ. ವಿಶ್ವಕರ್ಮ ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ಈಶ್ವರ್ ವಿಶ್ವಕರ್ಮ ಹೊಸಕೋಟೆ ಇವರು ಒಬ್ಬರು ಮಾತ್ರ ಈ ಸಭೆಯಲ್ಲಿ ಸಮಾಜದ ಪರವಾಗಿ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿವರವಾಗಿ ತಿಳಿಸಿ ಮಾತನಾಡಿರುತ್ತಾರೆ.