ರಾಮನಗರ: ಇದೇ 15 ರಂದು ನಗರಸಭೆ ಬಜೆಟ್ ಮಂಡನೆ ಮಾಡುವುದಾಗಿ ಅಧ್ಯಕ್ಷ ಕೆ.ಶೇಷದ್ರಿ (ಶಶಿ) ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿ ದೂಳು ಮುಕ್ತ, ಪರಿಸರ ಸ್ನೇಹಿ, ಸುಂದರ ರಾಮನಗರ ಮಾಡುವ ಜೊತೆಗೆ 31 ವಾರ್ಡ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜನಸ್ನೇಹಿ ಬಜೆಟ್ ತಯಾರಿಸಿದ್ದೇವೆ ಎಂದರು.
ಕಳೆದ ನಲವತ್ತು ದಿನಗಳಲ್ಲಿ 700 ಕ್ಕೂ ಹೆಚ್ಚು ನಗರಸಭೆ ಆಸ್ತಿಗಳಿಗೆ ನಮೂನೆ 3 ಖಾತೆಗಳನ್ನು ವಿತರಣೆ ಮಾಡಿದ್ದು, ಜನರ ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡಿರುವ ತೃಪ್ತಿ ನಮಗಿದೆ. ಮಾರ್ಚ್ 30 ರೊಳಗೆ ಉದ್ಯಮ ಪರವಾನಗಿ ಕಡ್ಡಾಯ ಹೊಂದಬೇಕು, ನಗರಸಭೆಗೆ ವ್ಯಾಪಾರ ವಹಿವಾಟು ಉದ್ದಿಮೆ ಪರವಾನಗಿ ತೆರಿಗೆ ಶೇ.50 ರಷ್ಟು ಮಾತ್ರ ಬರುತ್ತಿದ್ದು, ಉಳಿದ ಶೇ.50 ರಷ್ಟು ತೆರಿಗೆ ಖೋತಾ ಆಗುತ್ತಿದೆ. ಆಗಾಗಿ ಉದ್ದಿಮೆ ಪರವಾನಗಿ ಪಡೆದರೆ 1.5 ಕೋಟಿ ರೂ ಸಂಪನ್ಮೂಲ ನಗರಸಭೆಗೆ ಬರಲಿದೆ ಎಂದರು.
ನಗರದ ರಸ್ತೆಗಳಲ್ಲಿನ ದೂಳನ್ನು ಜೆಟ್ ಮಿಷನ್ ಗಳ ಮೂಲಕ ತೆರವು ಮಾಡುವುದು, ಕುಡಿಯುವ ನೀರಿನ ಸಮಸ್ಯೆ ಅರಿಯಲು ಸಮಿತಿ ರಚಿಸಿ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನಗರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ವತಿಯಿಂದ 47 ಕೋಟಿ ರೂ ವೆಚ್ಚದಲ್ಲಿ ಸೀರಳ್ಳ ಸೇರಿದಂತೆ ಹಲವೆಡೆ ಕೆಲಸಗಳನ್ನು ಕೈಗೆತ್ತಿ ಕೊಂಡಿದ್ದು, ಪ್ರಗತಿಯಲ್ಲಿವೆ. ಇದಕ್ಕೆ ಸದಸ್ಯರು ಮತ್ತು ಅಧಿಕಾರಿಗಳ ಶ್ರಮವಿದೆ ಎಂದು ಶ್ಲಾಘಿಸಿದ ಅವರು ಸುಂದರ ನಗರ ನಿರ್ಮಾಣ ಮಾಡೋಣ ಎಂದರು.
ಬಡಾವಣೆಗಳಲ್ಲಿನ ಹಿರಿಯರು ಸಮಿತಿ ರಚಿಸಿಕೊಂಡು ಗಿಡಗಳಿಗೆ ನೀರುಣಿಸುವುದು ಸೇರಿದಂತೆ ಪಾರ್ಕ್ಗಳ ನಿರ್ವಹಣೆ ಮಾಡುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ, ಮತ್ತಷ್ಟು ನಾಗರೀಕರು ಇಂತಹ ಕಾರ್ಯ ಕ್ಕೆ ಮುಂದಾಗುವಂತೆ ಮನವಿ ಮಾಡಿದರು.ಉಪಾಧ್ಯಕ್ಷೆ ಆಯಿಷಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷ, ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಸದಸ್ಯರಾದ ಅಸ್ಮದ್, ಪಾರ್ವತಮ್ಮ, ಸೋಮಶೇಖರ್, ವಿಜಯಕುಮಾರಿ, ಮುತ್ತು ರಾಜು, ಗಿರಿಜಮ್ಮ, ಪವಿತ್ರಾ, ಬೈರೇಗೌಡ, ಸಮದ್, ನಿಜಾಂ ಷರೀಪ್, ಜಯಲಕ್ಷ್ಮಮ್ಮ, ನಾಗಮ್ಮ ಅಧಿಕಾರಿ ಗಳಾದ ಕಿರಣ್, ನಟರಾಜುಗೌಡ ಮತ್ತಿತರರು ಇದ್ದರು.