ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತ ಪೊಲೀಸರಿಗೆ ಜಾರಿ ನಿರ್ದೇಶನಾಲಯ ಬರೆದಿರುವ ಪತ್ರ ರಾಜಕೀಯ ಪ್ರೇರಿತವಾಗಿದ್ದು ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಯಾವುದೇ ಅಧಿಕಾರವಿಲ್ಲ ಎಂದು ಸಿಎಂ ಪದೇ ಪದೇ ಪ್ರತಿಪಾದಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಿಎಂ ಅವರಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ.
“ಜಾರಿ ನಿರ್ದೇಶನಾಲಯ ಲೋಕಾಯುಕ್ತಕ್ಕೆ ಪ್ರಕರಣದ ಸಂಬಂಧ ಪತ್ರ ಬರೆದಿರುವುದು ರಾಜಕೀಯ ಪ್ರೇರಿತವಾಗಿದೆ. ನಾಳೆ ಸಿಂಗಲ್ ಬೆಂಚ್ ಆದೇಶದ ವಿರುದ್ಧ ನಮ್ಮ ರಿಟ್ ಮೇಲ್ಮನವಿ ಬರಲಿದೆ (HC ನಲ್ಲಿ ವಿಭಾಗೀಯ ಪೀಠದ ಮುಂದೆ), ವಿಚಾರಣೆಗೂ ಸ್ವಲ್ಪ ಮುನ್ನ ಜಾರಿ ನಿರ್ದೇಶನಾಲಯ ಪತ್ರ ಬರೆದಿರುವುದರ ಅರ್ಥವೇನು? ಮೊದಲನೆಯದಾಗಿ ಜಾರಿ ನಿರ್ದೇಶನಾಲಯಕ್ಕೆ ಈ ಬಗ್ಗೆ ತನಿಖೆ ನಡೆಸಲು ಅಧಿಕಾರವಿಲ್ಲ, ಕಾನೂನಾತ್ಮಕವಾಗಿ ಈ ರೀತಿ ಮಾಡಲು ಬರುವುದಿಲ್ಲ. ಎರಡನೆಯದಾಗಿ, ಅವರು ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ಇದನ್ನು ಮಾಡಿದ್ದಾರೆ.” ಎಂದು ಸಿಎಂ ಹೇಳಿದ್ದಾರೆ.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಿಎಂ, ‘ಲೋಕಾಯುಕ್ತರು ತನಿಖೆ ನಡೆಸುತ್ತಿದ್ದು, ಅವರು ವರದಿ ಸಲ್ಲಿಸಬೇಕು, ಅವರ ಮೇಲೆ ಪ್ರಭಾವ ಬೀರಲು, ಪೂರ್ವಗ್ರಹ ಪೀಡಿತರಾಗುವಂತೆ ಮಾಡಲು ಜಾರಿ ನಿರ್ದೇಶನಾಲಯ ಈ ರೀತಿ ಮಾಡಿದೆ. ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದ ಪ್ರಕಾರ, ಮುಡಾದಿಂದ ಪಾರ್ವತಿಗೆ 14 ಸೈಟ್ಗಳನ್ನು ಹಸ್ತಾಂತರಿಸುವಲ್ಲಿ ಹಲವಾರು ಅಕ್ರಮಗಳ ಪುರಾವೆಗಳು ಪತ್ತೆಯಾಗಿವೆ.
ಕೇಂದ್ರೀಯ ತನಿಖಾ ಸಂಸ್ಥೆ, ಇತ್ತೀಚೆಗೆ ಲೋಕಾಯುಕ್ತ ಪೊಲೀಸರಿಗೆ ಕಳುಹಿಸಿದ ಪತ್ರದಲ್ಲಿ, ಮುಡಾ ಬೇನಾಮಿ ಮತ್ತು ಇತರ ವಹಿವಾಟುಗಳಲ್ಲಿ ಒಟ್ಟು 1,095 ಸೈಟ್ಗಳನ್ನು “ಕಾನೂನುಬಾಹಿರವಾಗಿ” ಮಂಜೂರು ಮಾಡಿರುವುದು ತನ್ನ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿದೆ.