ನವದೆಹಲಿ: ಇಂದು ಸಂಸತ್ನ ಉಭಯ ಸದನಗಳಲ್ಲಿ ವಿಪಕ್ಷಗಳು ಉತ್ತರಪ್ರದೇಶದ ಘಟನೆ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿ ಗದ್ದಲ ಎಬ್ಬಿಸಿದೆ.ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಲೋಕಸಭಾ ಅಧ್ಯಕ್ಷ ಓಂಬಿರ್ಲಾ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು.
ಆದರೆ ಪ್ರತಿಪಕ್ಷಗಳು ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚೆಗೆ ಒತ್ತಾಯಿಸಿದರು.ಆದರೆ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪದ ವೇಳೆ ಈ ರೀತಿ ಒತ್ತಾಯಿಸುವುದು ಸರಿಯಲ್ಲ. ಪ್ರಶ್ನೋತ್ತರದ ನಂತರ ಈ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರಾದರೂ ಪಟ್ಟು ಬಿಡದ ಪ್ರತಿಪಕ್ಷಗಳು ಸದನದ ಬಾವಿಗಿಳಿದು ತಮ್ಮ ಒತ್ತಾಯವನ್ನು ಪಟ್ಟು ಹಿಡಿದು ಘಟನೆ ಸಂಬಂಧ ಉತ್ತರಪ್ರದೇಶದ ಸರ್ಕಾರ ಸರಿಯಾದ ಮಾಹಿತಿ ನೀಡಿಲ್ಲ.
ಈ ಬಗ್ಗೆ ಸ್ಪಷ್ಟವಾದ ಅಂಕಿಅಂಶಗಳನ್ನು ನೀಡಬೇಕು. ಕೇಂದ್ರ ಸರ್ಕಾರವೂ ಸಹ ಏನನ್ನು ಹೇಳುತ್ತಿಲ್ಲ. ಈ ಬಗ್ಗೆ ಸರಿಯಾದ ದಾಖಲೆ ಒದಗಿಸಿ ಎಂದು ಪಟ್ಟುಹಿಡಿದ ಪ್ರತಿಪಕ್ಷಗಳು ಸದನದ ಬಾವಿಯಲ್ಲಿ ನಿಂತು ಆಗ್ರಹ ಪಡಿಸಿದರು.ಸಭಾಧ್ಯಕ್ಷರು ಎಷ್ಟೇ ಮನವಿ ಮಾಡಿದರು. ಪ್ರತಿಪಕ್ಷಗಳ ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ. ಇತ್ತ ರಾಜ್ಯ ಸಭೆಯಲ್ಲೂ ಸಹ ಇದೇ ವಿಷಯ ಪ್ರತಿಧ್ವನಿಸಿ, ಪ್ರತಿಪಕ್ಷಗಳು ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ಕೋರುವಂತೆ ಒತ್ತಾಯಿಸಿ ಗದ್ದಲ ನಡೆಸಿದರು.