ದೊಡ್ಡಬಳ್ಳಾಪುರ: ಕೊನಘಟ್ಟ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಳ್ಳುತ್ತಿರುವ ರೈತರ ಜಮೀನಿಗೆ ನ್ಯಾಯಯುತ ಹಾಗೂ ವೈಜ್ಞಾನಿಕ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ರೈತರು ನಡೆಸುತ್ತಿರುವ ಹೋರಾಟ 176ನೇ ದಿನಕ್ಕೆ ಕಾಲಿಟ್ಟಿದ್ದರೂ ಕೆಐಎಡಿಬಿ ಅಧಿಕಾರಿಗಳು ರೈತರಿಗೆ ನೀಡುವ ಪರಿಹಾರದ ಕುರಿತು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆರೋಪಿಸಿದರು.
ವೈಜ್ಞಾನಿಕ ಬೆಲೆ ನಿಗಧಿಗೆ ಒತ್ತಾಯಿಸಿ ರೈತರು ಪ್ರತಿಭಟನಾ ಸ್ಥಳದಿಂದ ಎತ್ತಿನ ಗಾಡಿ, ಟ್ರ್ಯಾಕ್ಟರ್ ಗಳ ಜಾಥಾ ಮೂಲಕ ತಾಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ಎಸ್ಆರ್ ಬೆಲೆ ಆಧಾರದ ಮೇಲೆ ಭೂ ದರ 1:4 ನಿಗದಿ ಮಾಡಿ ರೈತರನ್ನು ಉಳಿಸಿ ಎಂದು ಒತ್ತಾಯಿಸಿದರು.
ರೈತರು ತಲಾತಲಾಂತರಗಳಿಗೆ ಜೀವನಡೆಸಿಕೊಂಡು ಬಂದಿರುವ ಜೀವನಾಧಾರ ಕೃಷಿಯು ಜಮೀನುಗಳನ್ನು ಸೂಕ್ತ ಬೆಲೆ ನೀಡದೆ ಕಸಿದುಕೊಳ್ಳಲು ಹುನ್ನಾರ ನಡೆಸಿರುವುದು ಸರಿಯಲ್ಲ. ಇದನ್ನು ವಿರೋಧಿಸಿ ರೈತರು ಕಳೆದ 176 ದಿನಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದರೂ ಸಹ ಯಾವುದೇ ಪರಿಹಾರ ನೀಡದೆ ದಲ್ಲಾಳಿಗಳಂತೆ ವರ್ತಿಸುವ ಅಧಿಕಾರಿಗಳು ನಮ್ಮಲ್ಲಿರುವುದು ವಿಪರ್ಯಾಸ. ರೈತರು ಭೂಮಿ ಮಾರಾಟ ಮಾಡುತ್ತಿಲ್ಲ ಅದು ಒಂದು ರೀತಿ ದಾನ ಮಾಡಿದಂತೆ. ಅಧಿಕಾರಿಗಳು ಈ ವಿಚಾರ ಅರಿತು ರೈತರ ಪರ ನಿಲ್ಲಲಿ ಎಂದು ಒತ್ತಾಯಿಸಿದರು.
ಎಚ್.ಡಿ.ಕುಮಾರಸ್ವಾಮಿ ಸ್ಪಂದನೆ:
ಅಧಿಕಾರಿಗಳ ಧೋರಣೆ ಬಗ್ಗೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಅವರು ಬೆಂಬಲವಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಐಎಡಿಬಿ ಭೂ ಪರಿಹಾರ ಧನ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗದ ರೀತಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರೈತರ ನಿಯೋಗ ಅವರನ್ನು ಸಂಪರ್ಕಿಸಿದ ದಿನವೇ ಕೆಐಎಡಿಬಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ರೈತರಿಗೆ ಉತ್ತಮ ಬೆಲೆ ನೀಡುವಂತೆ ತಿಳಿಸಿದ್ದಾರೆ ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಎಸ್.ಎಮ್. ಹರೀಶ್ಗೌಡ ತಿಸಿಳಿದರು.
ಪುನರ್ ಪರಿಶೀಲನೆ ಮಾಡಿ: ಸರ್ಕಾರದ ಮಾನದಂಡಗಳನ್ನು ಉಲ್ಲಂಘಿಸಿ ಭೂ ದರ ನಿಗಧಿ ಮಾಡಿರುವ ಹಿನ್ನಲೆ ರೈತರು ಕೆಐಎಡಿಬಿ ಅಧಿಕಾರಿಗಳ ವಿರುದ್ಧ 176 ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ಹೋರಾಟದಿಂದ ರೈತರ ಪ್ರತಿ ಎಕರೆ ಭೂಮಿಗೆ ಅಧಿಕಾರಿಗಳು 20 ಲಕ್ಷ ರೂ. ಅಧಿಕ ಮೊತ್ತ ಘೋಷಣೆ ಮಾಡಿರುವುದು ಯಶಸ್ಸಿಗೆ ಪೂರಕವಾಗಿದೆ. ಆದರೆ ಕಾನೂನಾತ್ಮಕವಾಗಿಯೇ ಕೇಂದ್ರ ಸರ್ಕಾರ ಹೊರಡಿಸಿದ 2013ರ ಭೂ ಸ್ವಾಧೀನ ಕಾಯ್ದೆಯ ಮಾನದಂಡಗಳ ಪ್ರಕಾರ 1:4ರ ದರಕ್ಕೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇವೆ.
ಜಿಲ್ಲಾಧಿಕಾರಿ ಪುನರ್ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಅನುಕೂಲಮಾಡಿಕೊಳ್ಳಬೇಕುಎಂದು ಕೊನಘಟ್ಟ ರೈತ ಮುಖಂಡ ಆನಂದ್ ಒತ್ತಾಯಿಸಿದರು.ಅಂತಿಮವಾಗಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ಹಾಗೂ ಉಪನೋಂದಣಾಧಿಕಾರಿ ಅನುಪಮ ರವರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಆದಿನಾರಾಯಣ ಹೊಸಹಳ್ಳಿ, ನಾಗದೇನಹಳ್ಳಿ,ಕೊನಘಟ್ಟ ಹಾಗೂ ಕೊಡಹಳ್ಳಿ ಗ್ರಾಮಗಳ ರೈತ ಮುಖಂಡರು,ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.