ಬೆಂಗಳೂರು: ಗುಬ್ಬಿಯ ಕಾಂಗ್ರೆಸ್ ಶಾಸಕ ಎಸ್ ಆರ್ ಶ್ರೀನಿವಾಸ್ ಜೊತೆ ತಮಗೆ ಯಾವುದೇ ವೈಷಮ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.ನಗರರಲ್ಲಿಂದು ಮಾಧ್ಯಮಗಳ ಜೊತೆ ಮಾತಾಡಿದ ಅವರು, ರಾಜಕಾರಣವೆಂದ ಮೇಲೆ ಅಸಮಾಧಾನಗಳು ಇದ್ದೇ ಇರುತ್ತವೆ.
ತಮ್ಮ ಮತ್ತು ಕೆಎನ್ ರಾಜಣ್ಣ ವಿರುದ್ಧ ಅವರಿಗೆ ದ್ವೇಷವೇನೂ ಇಲ್ಲ, ಕಳೆದ ಅಸೆಂಬ್ಲಿ ಚುನಾವಣೆಯಿಂದ ಕೊಂಚ ಅಸಮಾಧಾನಗೊಂಡಿದ್ದಾರೆ, ನಾವೆಲ್ಲ ಒಂದೇ ಪಕ್ಷದಲ್ಲಿದ್ದೇವೆ ಮಾತು ಬಿಡುವಂಥ ಪ್ರಮೇಯವೇನೂ ಇಲ್ಲ, ಅವರೊಂದಿಗೆ ಮಾತಾಡಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಾಗಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.ಇದೇ ಸಂದರ್ಭದಲ್ಲಿ ಗೋಹಂತಕರಿಗೆ ಗುಂಡಿಕ್ಕಬೇಕು ಎಂದು ಹೇಳಿಕೆ ನೀಡಿರುವ ಸಚಿವ ಮಂಕಾಳು ವೈದ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮಂಕಾಳು ವೈದ್ಯ ವೈಯಕ್ತಿಕವಾಗಿ ಎಂದಷ್ಟೇ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದರು.
ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ಹೊರಡಿಸಲಾಗುವ ಸುಗ್ರೀವಾಜ್ಞೆ ಕಾಯ್ದೆಯನ್ನು ಈಗಾಗಲೇ ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ಇದಕ್ಕೆ ರಾಜ್ಯಪಾಲರು ಇಂದು ಸಹಿಹಾಕುವ ನಿರೀಕ್ಷೆಯಿದೆ. ಸುಗ್ರೀವಾಜ್ಞೆಯಲ್ಲಿ ಕಿರುಕುಳಕ್ಕೆ ಇರುವ 3 ವರ್ಷ ಇದ್ದ ಶಿಕ್ಷೆಯ ಅವಧಿಯನ್ನು 10 ವರ್ಷಕ್ಕೆ ಏರಿಸಲಾಗಿದೆ ಹಾಗೂ ದಂಡವನ್ನು 5 ಲಕ್ಷಕ್ಕೆ ಹೆಚ್ಚಿಸಿರುವುದಾಗಿ ಅವರು ತಿಳಿಸಿದ್ದಾರೆ.ಕಾನೂನಿನಲ್ಲಿರುವ ತೊಡಕುಗಳನ್ನು ಸರಿಪಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.



