ಬೆಂಗಳೂರು: ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ. ನಾನು ಕಾಂಗ್ರೆಸ್ ಪಕ್ಷದ ಪ್ರತಿನಿಧಿ. ಹೀಗಾಗಿ ಕುಮಾರಸ್ವಾಮಿ ಪ್ರಕರಣದ ಬಗ್ಗೆ ತಿಳಿದುಕೊಂಡು ಅನಂತರ ಈ ಬಗ್ಗೆ ಮಾತನಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿಯನ್ನು ಎಸ್ಐಟಿ ರಾಜ್ಯಪಾಲರಿಗೆ ಸಲ್ಲಿಸಿದ್ದು, ಈ ವಿಚಾರದಲ್ಲಿ ರಾಜ್ಯಪಾಲರ ಪ್ರತಿಕ್ರಿಯೆ ಏನಿರಬಹುದು ಎನ್ನುವ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಹೀಗೆ ಉತ್ತರಿಸಿದರು.
ಶೇಷಾದ್ರಿಪುರ ಜಂಕ್ಷನ್ ಬಳಿ ರಾಜೀವ್ ಗಾಂಧಿ ಅವರ ಪ್ರತಿಮೆಗೆ ಇಂದು ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.ಕಾಂಗ್ರೆಸ್ ಮುಖಂಡರಿಂದ ರಾಜ್ಯಪಾಲರ ನಿಂದನೆ ವಿರುದ್ಧ ಬಿಜೆಪಿ ಪ್ರತಿಭಟನೆ ಬಗ್ಗೆ ಕೇಳಿದಾಗ, “ಬಿಜೆಪಿಯವರು ಸಂವಿಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ವರ್ತಿಸುತ್ತಿದ್ದಾರೆ.
ರಾಜ್ಯಪಾಲರನ್ನು ಬಿಜೆಪಿಯವರು ತಮ್ಮ ಏಜೆಂಟರನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇವೆಲ್ಲ ಸಾಕ್ಷಿ” ಎಂದು ತಿರುಗೇಟು ನೀಡಿದರು.
“ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿ ಅವರ ಆಲೋಚನೆಗಳು ಇಂದಿನ ಯುವಪೀಳಿಗೆಗೆ ಸ್ಪೂರ್ತಿ. ಆದ ಕಾರಣ ಪ್ರತಿ ವರ್ಷ ಇವರ ಜನ್ಮದಿನವನ್ನು ಬಿಬಿಎಂಪಿಯಿಂದ ನಡೆಸಬೇಕು ಎಂದು ಆದೇಶ ನೀಡಲಾಗುವುದು” ಎಂದರು.
“ಪಂಚಾಯತ್ ಮಟ್ಟದಿಂದ ಪಾರ್ಲಿಮೆಂಟ್ ವರೆಗೆ ನಾಯಕರು ರಾಜೀವ್ ಗಾಂಧಿ ಅವರನ್ನು ಮರೆಯುವಂತಿಲ್ಲ. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ತಕ್ಷಣ ರಾಜೀವ್ ಗಾಂಧಿಯವರ ನೂತನ ಪ್ರತಿಮೆ ನಿರ್ಮಾಣಕ್ಕೆ ಸಹಿ ಹಾಕಿದೆ. ದಿನೇಶ್ ಗುಂಡೂರಾವ್ ಅವರ ಇಚ್ಛೆಯಂತೆ, ಅವರ ಕ್ಷೇತ್ರ ವ್ಯಾಪ್ತಿಯ ಶೇಷಾದ್ರಿಪುರಂ ಸಿಗ್ನಲ್ ಮುಕ್ತ ಜಂಕ್ಷನ್ ಗೆ ರಾಜೀವ್ ಗಾಂಧಿ ಹೆಸರಿಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಲಾಗಿತ್ತು” ಎಂದರು.
“18 ವರ್ಷಕ್ಕೆ ಮತದಾನದ ಹಕ್ಕು, ಪಂಚಾಯತ್ ರಾಜ್ ತಿದ್ದುಪಡಿ, ಐಟಿ ಬಿಟಿ ಬೆಳವಣಿಗೆಗೂ ಇವರೇ ಕಾರಣ. ಇಂದು ಎಲ್ಲರ ಬಳಿ ಎರಡೆರಡು ಮೊಬೈಲ್ ಗಳಿವೆ. ಇದಕ್ಕೆ ಕಾರಣ ರಾಜೀವ್ ಗಾಂಧಿಯವರ ದೂರದೃಷ್ಟಿಯ ಟೆಲಿಫೋನ್ ಕ್ರಾಂತಿ ಕಾರಣ” ಎಂದು ಹೇಳಿದರು.”ದೇಶದ ಸಮಗ್ರತೆ ಐಕ್ಯತೆ ಶಾಂತಿಗಾಗಿ ನೆಹರು ಕುಟುಂಬ ದುಡಿದಿದೆ. ರಾಜೀವ್ ಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ವಿಚಾರಗಳನ್ನು ನಾವು ಮರೆಯಬಾರದು ” ಎಂದು ತಿಳಿಸಿದರು.