ಚಿಕ್ಕಬಳ್ಳಾಪುರ: ಒಂದು ವಿದ್ಯಾ ಸಂಸ್ಥೆಯಲ್ಲಿ ನೀತಿ ರೂಪಿಸುವ ಸರಕಾರ, ಅನುಷ್ಠಾನಕ್ಕೆ ತರುವ ಆಡಳಿತ ಮಂಡಳಿ, ಇವುಗಳ ನಡುವೆ ಸೇತುವೆಯಾಗಿ ನಿಲ್ಲುವ ಪೋಷಕರು, ಫಲಾನುಭವಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ ಶಿಕ್ಷಕಿಯರು ಒಂದು ವಾಹನದ ನಾಲ್ಕು ಗಾಲಿಗಳಿದ್ದಂತೆ. ಉತ್ತಮವಾದ ಪಠ್ಯ ವಿಷಯಗಳನ್ನು ಸರಕಾರ ರೂಪಿಸುತ್ತದೆ ಅನುಷ್ಠಾನಕ್ಕೆ ತರುವ ಕೆಲಸವನ್ನು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯು ಮಾಡಿದರೆ ಪರಿಪೂರಕವಾಗಿ ಉಳಿದವರು ಸ್ಪಂದಿಸಿದಾಗ ಉದ್ದೇಶಿತ ಕಾರ್ಯ ನೆರವೇರುತ್ತದೆ. ಅವರವರಿಗೆ ಅವರವರದೇ ಆದ ಹೊಣೆಗಾರಿಕೆಗಳಿರುತ್ತವೆ. ಹೊಣೆಗಾರಿಕೆಯನ್ನು ಅರಿತು ಉತ್ತಮ ಫಲಿತಾಂಶಕ್ಕಾಗಿ ಒಟ್ಟಾಗಿ ಶ್ರಮಿಸಿದಾಗ ಯಶಸ್ಸು ದೊರೆಯುತ್ತದೆ ಎಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸಾಹಿತ್ಯ ವಿಭೂಷಣ ಬಿರುದಾಂಕಿತ ಕವಿ, ಶಿಕ್ಷಕ ಅಡ್ಕಸ್ಥಳ ಕಬೀರ್ ತಿಳಿಸಿದರು.
ಅವರು ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ತಪಸ್ವಿ ವಿದ್ಯಾ ಕೇಂದ್ರದ 15ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಚಿಕ್ಕಬಳ್ಳಾಪುರದ ಕುಡುವತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ, ಕವಯತ್ರಿ ಶ್ರೀಮತಿ ಲತಾ ರಾಮಮೋಹನ್ ಅವರು ವಾರ್ಷಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ಒಂದೊಂದು ಮಗುವು ರಾಷ್ಟ್ರದ ಸಂಪತ್ತು, ರಾಯಲ್ಪಾಡುವಿನಂತಹ ಗ್ರಾಮೀಣ ಪ್ರದೇಶದಲ್ಲಿ ದೊರೆಯುತ್ತಿರುವ ಗುಣಮಟ್ಟದ ಸಮಗ್ರ ಶಿಕ್ಷಣವನ್ನು ಪಡೆದು ಜೀವನದ ಗುರಿಯನ್ನು ಮುಟ್ಟಬೇಕು ಎಂಬ ಕರೆಯನ್ನು ನೀಡುವುದರ ಜೊತೆಗೆ ಸ್ವರಚಿತ ಕವನ ವಾಚನದ ಮೂಲಕ ಸಾರ್ಥಕ ಬದುಕಿನ ಚಿತ್ರಣವನ್ನು ನೀಡಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಣ ಮಂಡಳಿಯ ವಿಶ್ರಾಂತ ನಿರ್ದೇಶಕ ಶ್ರೀ ದೇವಿ ಪ್ರಕಾಶ್ ಅವರು ಅಂದಿನಿಂದ ಇಂದಿನವರೆಗೆ ಶಿಕ್ಷಣ ನಡೆದು ಬಂದ ದಾರಿ, ಶಿಕ್ಷಣದ ಸವಾಲುಗಳು ಅದನ್ನು ಎದುರಿಸಲು ಬೇಕಾದ ಮನೋಸ್ಥೈರ್ಯ ಮುಂತಾದವುಗಳನ್ನು ಸಮಯೋಚಿತವಾಗಿ ನಿರೂಪಿಸಿ ಮಾತನಾಡಿದರು.ಸಭಾ ಕಾರ್ಯಕ್ರಮದ ನಂತರ ವಿಜೇತರಿಗೆಬಹುಮಾನಗಳ ವಿತರಣೆ ವಿವಿಧ ವಿನೋದಾವಳಿ ಗಳು ನೆರವೇರಿದವು. ಎಲ್ ಕೆ ಜಿ ಮತ್ತು ಯುಕೆಜಿ ಪುಟಾಣಿಗಳು ನಡೆಸಿಕೊಟ್ಟ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಸೂರೆಗೊಂಡಾಗ ಹಿರಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾರ್ಯಕ್ರಮಗಳು ಸರ್ವರನ್ನು ಮಂತ್ರಮುಗ್ಧವಾಗಿಸಿತು.
ಆಂಧ್ರಪ್ರದೇಶ ರಾಜ್ಯದ ಗಡಿಯ ಅಂಚಿನಲ್ಲಿ ರುವ ಈ ವಿದ್ಯಾಸಂಸ್ಥೆಯು 15 ವಸಂತಗಳನ್ನು ಪೂರೈಸಿದ್ದು ದಿಗ್ದಿಗಂತಗಳಲ್ಲಿ ದಿಗ್ವಿಜಯವನ್ನು ಸಾಧಿಸುತ್ತಿದೆ.ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಗಳೊಂದಿಗೆ ಸಂಸ್ಥೆಯ ಪ್ರಾಂಶುಪಾಲೆ ಪದ್ಮಾವತಿ, ಸಂಯೋಜ ಕ ಜಿ ಉಪೇಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಮತ್ತು ವಿ ಬಾಬು ಅವರು ಕಾರ್ಯಕ್ರಮವನ್ನು ಜಂಟಿಯಾಗಿ ನಿರೂಪಿಸಿ ಯಶಸ್ವಿಗೊಳಿಸಿದರು.